ಕಬ್ಬಿಗೆ 4,500 ರೂ. ಘೋಷಿಸಲು ಆಗ್ರಹ: ನಗರದಲ್ಲಿ ರೈತ ಸಂಘದಿಂದ ಪ್ರತಿಭಟನೆ

21_12_Mdy_03(Protest)
Published on

ಮಂಡ್ಯ: ಪ್ರತಿ ಟನ್ ಕಬ್ಬಿಗೆ 8.5 ಇಳುವರಿ ಆಧಾರದ ಮೇಲೆ 4,500 ರೂ. ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ರೈತ ಸಂಘದ ಮೂಲ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸರ್ ಎಂವಿ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯಿಂದಾಗಿ ರೈತರು ದಿನೇ ದಿನೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಅಕಾಲಿಕವಾಗಿ ಸುರಿದ ಮಳೆಯಿಂದಲೂ ಸಹ ಬೆಳೆ ನಷ್ಟ ಉಂಟಾಗಿ ರೈತನ ಸ್ಥಿತಿ ಶೋಚನೀಯವಾಗಿದೆ. ಈಗಿದ್ದೂ ರೈತರು ಬೆಳೆದ ಬೆಳೆಗಳಿಗೆ ಸರ್ಕಾರಗಳು ಇದುವರೆವಿಗೂ ಯೋಗ್ಯವಾದ ಬೆಲೆ ನಿಗದಿ ಮಾಡದೆ ರೈತರು ನ್ಯಾಯಕ್ಕಾಗಿ ಬೀದಿಗಿಳಿಯುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದ್ದರಿಂದ ಬೆಳೆಗಳಿಗೆ ಶೀಘ್ರ ಬೆಂಬಲ ಬೆಲೆ ನಿಗದಿ ಮಾಡಬೇಕು. ಪ್ರತಿ ಕ್ವಿಂಟಾಲ್ ಭತ್ತಕ್ಕೆ ಕರಾವಳಿ ಜಿಲ್ಲೆಗಳಲ್ಲಿ ಘೋಷಿಸಿರುವಂತೆ ಭತ್ತ ಬೆಳೆಯುವ ಎಲ್ಲ ಜಿಲ್ಲೆಗಳಿಗೂ ಅನ್ವಯವಾಗುವಂತೆ ಬೆಂಬಲ ಬೆಲೆ ಘೋಷಿಸಬೇಕು. ಪ್ರತಿ ಲೀಟರ್ ಹಾಲಿನ ದರವನ್ನು 40 ರೂ.ಗೆ ಹೆಚ್ಚಿಸಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿದ್ಯುತ್ ತಿದ್ದುಪಡಿ ಮತ್ತು ಖಾಸಗೀಕರಣವನ್ನು ಕೈಬಿಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಬೇಕು. ರೇಷ್ಮೆ ಮಂಡಳಿಯನ್ನು ಕೃಷಿಯೊಡನೆ ಅಳವಡಿಸದೆ ಈಗಿರುವಂತೆ ಪ್ರತ್ಯೇಕವಾಗಿ ಇಲಾಖೆ ಉಳಿಸಬೇಕು. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯಾದ ಕೊಬ್ಬರಿ ಬೆಲೆ ಕುಸಿದಿರುವುದರಿಂದ ರೈತರು ತೆಂಗಿನ ಬೆಳೆಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಕೂಡಲೇ ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹೋರಾಟಗಾರ್ತಿ ಸುನಂದಾ ಜಯರಾಂ, ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಕೆ.ರಾಮಚಂದ್ರ, ವೆಂಕಟೇಶ್, ಪ್ರಭುಲಿಂಗು, ಕೀಲಾರ ಸೋಮಶೇಖರ್, ವಿ.ಸಿ. ಉಮೇಶ, ಎಲ್. ಸುರೇಶ, ಪಿ.ಜಿ. ನಾಗೇಂದ್ರ, ಕೆ.ಜಿ. ಪ್ರಕಾಶ, ಸುರೇಶ, ವಿ.ಎಂ. ಶಂಕರ, ಡಿ.ಸಿ. ಲಿಂಗೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net