ಬಂದ್ ಹಿಂಪಡೆಯಲು ಒಪ್ಪದ ರೈತರು: 39ನೇ ದಿನಕ್ಕೆ ಕಾಲಿಟ್ಟ ಧರಣಿ

14_12_Mdy_02(Protest)
Published on

ಮಂಡ್ಯ: ಪ್ರತಿ ಟನ್ ಕಬ್ಬಿಗೆ 4,500 ರೂ. ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ. ನಿಗದಿ ಮಾಡಬೇಕೆಂದು ಆಗ್ರಹಿಸಿ ರೈತ ಸಂಘದಿಂದ ನಗರದ ಸರ್ ಎಂವಿ ಪ್ರತಿಮೆ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಬುಧವಾರ 38ನೇ ಪೂರೈಸಿದೆ. ಈ ನಡುವೆ ಡಿ.19ರಂದು ಕರೆ ನೀಡಿರುವ ಮಂಡ್ಯ ನಗರ ಬಂದ್‌ಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮನವಿ ತಿರಸ್ಕಾರ:

ಬೇಡಿಕೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ರೈತ ಸಂಘದ ಕಾರ್ಯಕರ್ತರು ಇತರ ಸಂಘಟನೆಗಳ ಹಾಗೂ ವಿವಿಧ ಹಳ್ಳಿಗಳ ಗ್ರಾಮಸ್ಥರೊಂದಿಗೆ ಸಹಕಾರದೊಂದಿಗೆ ಮಂಡ್ಯ ಬಂದ್‌ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಆಗಮಿಸಿ ಬಂದ್ ವಾಪಸ್ ಪಡೆಯುವಂತೆ ಮನವಿ ಮಾಡಿದರು. ಆದರೆ, ರೈತರು ಮನವಿಯನ್ನು ತಿರಸ್ಕರಿಸಿದರು.

ಕಬ್ಬು, ಹಾಲು ಮತ್ತು ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಕಳೆದ ಹಲವು ದಿನಗಳಿಂದ ರೈತ ಸಂಘದ ಕಾರ್ಯಕರ್ತರು ನಡೆಸುತ್ತಿರುವ ಧರಣಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗಿದೆ. ಮತ್ತೊಮ್ಮೆ ಧರಣಿಯ ಬಗ್ಗೆ ಸಿಎಂಗೆ ಮನವರಿಕೆ ಮಾಡಿಕೊಡುತ್ತೇನೆ. ನಿಮ್ಮ ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು. ಆದರೆ, ರೈತರು ಸಚಿವ ಗೋಪಾಲಯ್ಯ ಅವರ ಮನವಿಯನ್ನು ತಿರಸ್ಕರಿಸಿ ಡಿ.19ರಂದು ಮಂಡ್ಯ ಬಂದ್ ಮಾಡುವ ಬಗ್ಗೆ ಸಚಿವರ ಮುಂದೆಯೇ ಘೋಷಣೆ ಮಾಡಿದರು.

ಸಿಎಂಗೆ ಘೇರಾವ್ ಎಚ್ಚರಿಕೆ: ಡಿ.16ರಂದು ಪಾಂಡವಪುರದಲ್ಲಿ ನಡೆಯಲಿರುವ ಬಿಜೆಪಿ ಸಂಕಲ್ಪ ಯಾತ್ರೆಗೆ ಇದೇ ಮಾರ್ಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರಳಲಿದ್ದು, ಅಂದು ಅಡ್ಡಹಾಕಿ ಘೇರಾವ್ ಮಾಡಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ. ಮಧುಚಂದನ್, ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ಶಿವಳ್ಳಿ ಚಂದ್ರು ಇತರರಿದ್ದರು.

ಬಂದ್ ಬೆಂಬಲಿಸುವಂತೆ ಮನವಿ: ಇನ್ನೊಂದೆಡೆ ಬಂದ್‌ಗೆ ಬೆಂಬಲಿಸುವಂತೆ ಎಸ್.ಸಿ.ಮಧುಚಂದನ್ ನೇತೃತ್ವದಲ್ಲಿ ಎಲ್ಲೆಡೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಮಾತ್ರವಲ್ಲದೆ ಹಳ್ಳಿಗಳಿಗೆ ತೆರಳಿ ಕರಪತ್ರ ವಿತರಿಸಿ ಬಂದ್‌ನಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಇತ್ತ ಸಾಮಾಜಿಕ ಜಾಲತಾಣವನ್ನು ಸದುಪಯೋಗಪಡಿಸಿಕೊಂಡು ಬಂದ್ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ.

ಕೃಷಿಕನ ಸಂಕಷ್ಟಕ್ಕೆ ಸರ್ವರೂ ಜತೆಯಾಗೋಣ ಎನ್ನುವ ಶೀರ್ಷಿಕೆಯಡಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಲಾಗುತ್ತಿದೆ. ಯುವ ಕೃಷಿಕರಿಗೆ ಹೆಣ್ಣು ಕೊಡದಿರಲು ಕಾರಣ ಕೃಷಿಯಲ್ಲಿ ಆದಾಯವಿಲ್ಲ ಎಂಬ ಅಪನಂಬಿಕೆಯಿಂದಷ್ಟೇ. ಶ್ರಮಕ್ಕೆ ತಕ್ಕ ಫಲ ದೊರೆಯದಿರುವುದೇ ಇದಕ್ಕೆ ಮುಖ್ಯ ಕಾರಣ. ಪ್ರತಿಯೊಬ್ಬ ರೈತ ಮಕ್ಕಳು ಕಾಲ್ಕಿತ್ತು ಮಂಡ್ಯ ನಗರಕ್ಕೆ ಬನ್ನಿ, ಈ ಹೋರಾಟದಲ್ಲಿ ಪಾಲ್ಗೊಳ್ಳಿ. ನ್ಯಾಯಯುತ ಬೆಲೆ ನೀಡಿದರೆ ಕೃಷಿಕರು ಸಹ ದೊಡ್ಡ ಉದ್ಯಮಿಗಳು ಎಂದು ಎಚ್ಚರಿಸೋಣ ಎಂದು ಕರೆ ನೀಡಲಾಗುತ್ತಿದೆ.

ಎರಡು-ಮೂರು ಎಕರೆ ಕಬ್ಬು, ಭತ್ತ, ರಾಗಿ ಬೆಳೆದು ನಾಲ್ಕೈದು ಹಸುಗಳಿಟ್ಟು ಹಾಲು ಕರೆದು ಡೇರಿಗೆ ಹಾಕಿದರೂ ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲಾಗದ ಸಮಸ್ತ ರೈತರು ಈ ಹೋರಾಟದಲ್ಲಿ ಪಾಲ್ಗೊಳ್ಳಿ. ಇದು ನಮ್ಮ ನಿಮ್ಮೆಲ್ಲರ ಹೋರಾಟವೆಂದು ಮನವಿ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net