ಅಕ್ರಮ ಒತ್ತುವರಿ ತೆರವುಗೊಳಿಸಿ: ನಗರದಲ್ಲಿ ರಾಯಶೆಟ್ಟಿಪುರ ಗ್ರಾಮಸ್ಥರ ಪ್ರತಿಭಟನೆ

1 (1)
Published on

ಮಂಡ್ಯ: ರಾಯಶೆಟ್ಟಿಪುರ ಗ್ರಾಮದಲ್ಲಿ ಕಟಾವು ಕಬ್ಬು ಸಾಗಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರೂ ಸಹ ಅಡ್ಡಿಪಡಿಸಲಾಗಿದೆ ಎಂದು ತಪ್ಪು ಮಾಹಿತಿ ನೀಡುವುದರ ಜತೆಗೆ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಮಾತ್ರವಲ್ಲದೆ ಕೆಲವರು ಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುತ್ತಿದ್ದಾರೆಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು.

ಗ್ರಾಮದ ಆಬಲವಾಡಿ ಗಡಿ ರಸ್ತೆಯನ್ನು ಮುಚ್ಚಿದ್ದಾರೆಂದು ತಹಸೀಲ್ದಾರ್ ಅವರಿಗೆ ದೂರು ನೀಡಿ ಪ್ರಕರಣ ದಾಖಲಿಸಲಾಗಿದೆ. ಅಂತೆಯೇ ರಸ್ತೆ ದೂರಿನ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಪಕ್ಕದಲ್ಲಿನ ರಸ್ತೆಯು ಸರ್ವೆ ನಂ.133 ರಿಂದ 26ರವರೆಗೆ ನಕಾಶೆಯಲ್ಲಿ ಬಂಡಿ ದಾರಿ ಎಂದು ನಮೂದಾಗಿದೆ. ಈ ರಸ್ತೆಯನ್ನು ದಲಿತ ಮುಖಂಡನ ಅನುಯಾಯಿಗಳು ಒತ್ತುವರಿ ಮಾಡಿಕೊಂಡಿರುತ್ತಾರೆ. ಹಾಗಾಗಿ ಸಾರ್ವಜನಿಕರು ಸಲ್ಲಿಸಿದ ದೂರಿನ ಮೇರೆಗೆ ತಹಸೀಲ್ದಾರ್ ಆದೇಶದಂತೆ ಅಧಿಕಾರಿಗಳು ತೆರವುಗೊಳಿಸಲು ಬರುವ ಸಂದರ್ಭದಲ್ಲಿ ದಲಿತ ಮುಖಂಡ ವೆಂಕಟಗಿರಿಯಯ್ಯ ತಹಸೀಲ್ದಾರ್ ಮೇಲೆ ಪ್ರಭಾವ ಬೀರಿ ಒತ್ತುವರಿ ತೆರವು ತಡೆ ಹಿಡಿದಿರುತ್ತಾರೆ ಎಂದು ದೂರಿದರು.

ಅಷ್ಟೇ ಅಲ್ಲದೆ ಸಣ್ಣ ಹಿಡುವಳಿದಾರರ ಜಮೀನಿನಲ್ಲಿ ಬೇರೆ ರಸ್ತೆ ನಿರ್ಮಿಸಿ ಕೊಡಿ ಎಂದು ದೂರು ಸಲ್ಲಿಸಿ ತೊಂದರೆಕೊಡುತ್ತಿದ್ದು, ತಮ್ಮ ಸ್ವಾರ್ಥಕ್ಕೆ ಕೆಲವರನ್ನು ಬಳಸಿಕೊಂಡು ಕಟಾವು ಕಬ್ಬು ಸಾಗಾಣಿಕೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕೆರಗೋಡು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರೂ ಸಬ್‌ಇನ್‌ಸ್ಪೆಕ್ಟರ್ ಮತ್ತು ಡಿಎಸ್ಪಿ ಸ್ಥಳಕ್ಕೆ ಬಂದು ಕಬ್ಬು ಸಾಗಾಣಿಕೆಗೆ ಅವಕಾಶ ಮಾಡಿಕೊಟ್ಟರೂ ಸಹ ಅದನ್ನು ಒಪ್ಪದೆ ಸಣ್ಣ ಹಿಡುವಳಿದಾರರ ಜಮೀನಿನಲ್ಲಿ ರಸ್ತೆ ನಿರ್ಮಿಸಿ ಕೊಡಿ ಎಂದು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ತೊಂದರೆ ಕೊಡುತ್ತಿದ್ದಾರೆ. ಮಾತ್ರವಲ್ಲದೆ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಸರ್ಕಾರಿ ನಕಾಶೆಯಲ್ಲಿರುವ ರಸ್ತೆಯ ಅಕ್ರಮ ಒತ್ತುವರಿ ತೆರವುಗೊಳಿಸಬೇಕು. ಗ್ರಾಮದಲ್ಲಿ ಇಲ್ಲಸಲ್ಲದ ಸುಳ್ಳು ಸುದ್ದಿ ಹಬ್ಬಿಸಿ ಗಲಭೆಗೆ ಪ್ರಚೋದನೆ ನೀಡುತ್ತಿರುವ ದಲಿತ ಮುಖಂಡ ಹಾಗೂ ಇತರರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಆರ್.ಎಂ.ಪ್ರಕಾಶ್, ಶಿವರಾಮು, ಲಿಂಗರಾಜು, ದೇವರಾಜು, ದೇವೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net