

ವಿಜಯವಾಣಿ ವಿಶೇಷ ಕೊಪ್ಪಳ
ಇತ್ತೀಚಿನ ರಾಜಕೀಯದಲ್ಲಿ ಒಂದೆರಡು ಬಾರಿ ಶಾಸಕರಾಗುವುದೇ ಸಾಹಸ ಎನ್ನುವಂತಾಗಿದೆ. ಆದರೆ 90ರ ದಶಕದಲ್ಲಿ ಹಲವರು ಹತ್ತಾರು ಚುನಾವಣೆ ಎದುರಿಸಿದ್ದು, ಅವುಗಳಲ್ಲಿ ಅಧಿಕ ಬಾರಿ ಗೆದ್ದು ಬೀಗಿದ್ದಾರೆ. ಅಂಥ ನಾಯಕರು ಜಿಲ್ಲೆಯಲ್ಲಿದ್ದು, ಕೆಲವರು ರಾಜಕೀಯವಾಗಿ ಸಕ್ರಿಯರಾಗಿದ್ದರೆ, ಇನ್ನು ಕೆಲವರು ದೂರ ಸರಿದಿದ್ದಾರೆ.
ಜಿಲ್ಲೆಯಲ್ಲಿ ಘಟಾನುಘಟಿ ನಾಯಕರೆಂದ ತಕ್ಷಣ ಸದ್ಯ ನೆನಪಾಗುವುದು ಎಚ್.ಜಿ.ರಾಮುಲು, ಶ್ರೀರಂಗದೇವರಾಯಲು, ಬಸವರಾಜ ರಾಯರಡ್ಡಿ, ಸಂಗಣ್ಣ ಕರಡಿ ಇತರರು. ಇವರಲ್ಲಿ ಈವರೆಗೂ ಅತಿ ಹೆಚ್ಚು ಚುನಾವಣೆ ಕಂಡವರ ಪೈಕಿ ರಾಯರಡ್ಡಿ ಮೊದಲಿಗರ ಸಾಲಿನಲ್ಲಿ ನಿಲ್ಲುತ್ತಾರೆ. 1985ರಲ್ಲಿ 27ನೇ ವಯಸ್ಸಿನಲ್ಲೇ ಯಲಬುರ್ಗಾ ಕ್ಷೇತ್ರದಲ್ಲಿ ಜೆಎನ್‌ಪಿ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ರಾಯರಡ್ಡಿ ಮೊದಲ ಚುನಾವಣೆಯಲ್ಲೇ 28,668 ಮತ ಪಡೆದು ಗೆದ್ದು ಬೀಗಿದ್ದಾರೆ.
ಅಲ್ಲಿಂದ 1989ರಲ್ಲಿ ಜನತಾದಳದಿಂದ (37,215 ಮತ) ಮತ್ತು 1994ರಲ್ಲೂ (47,215 ಮತ) ಸತತ ಗೆಲ್ಲುವ ಮೂಲಕ ಹ್ಯಾಟ್ರಿಕ್ ವೀರ ಎನಿಸಿಕೊಂಡಿದ್ದಾರೆ. ಅಲ್ಲದೆ, ಮೊಯ್ಲಿ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದರು. ಶಾಸಕರಿರುವಾಗಲೇ ಪಕ್ಷದ ಕರೆ ಮೇರೆಗೆ 1996ರಲ್ಲಿ ಲೋಕಸಭೆ ಚುನಾವಣೆಗೆ ಧುಮುಕಿ 1991ರಲ್ಲಿ ಸಿದ್ದರಾಮಯ್ಯನನ್ನೇ ಮಣಿಸಿದ್ದ ಕಾಂಗ್ರೆಸ್‌ನ ಬಸವರಾಜ ಪಾಟೀಲ್ ಅನ್ವರಿ ಅವರನ್ನು ಸೋಲಿಸಿ ಸತತ ನಾಲ್ಕನೇ ಗೆಲುವು ದಾಖಲಿಸಿ ರಾಯರಡ್ಡಿ ಇತಿಹಾಸ ನಿರ್ಮಿಸಿದರು.
ಅತಂತ್ರ ಸ್ಥಿತಿ ನಿರ್ಮಾಣದಿಂದ 1998 ಮತ್ತು 1999ರಲ್ಲಿ ನಡೆದ ಮತ್ತೆರಡು ಲೋಕಸಭೆ ಚುನಾವಣೆಯಲ್ಲಿ ಜನತಾದಳದಿಂದ ಹಾಗೂ 2009ರಲ್ಲಿ ಕಾಂಗ್ರೆಸ್‌ನಿಂದ ಲೋಕಸಭೆಗೆ ಸ್ಪರ್ಧಿಸಿದ್ದು ಗೆಲುವು ದಕ್ಕದ ಕಾರಣ ಲೋಕಸಭೆ ಪ್ರವೇಶಿಸುವ ಅವಕಾಶದಿಂದ ವಂಚಿತರಾದರು. ಆದರೆ, ರಾಜ್ಯ ರಾಜಕಾರಣದಲ್ಲಿ ಮುಂದುವರೆದಿದ್ದು, 2004 ಮತ್ತು 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ರಾಯರಡ್ಡಿ ಆಯ್ಕೆಯಾಗಿದ್ದು, ಸಿದ್ದರಾಮಯ್ಯ ಸರ್ಕಾರದ ಕೊನೇ ವರ್ಷದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ದೆಹಲಿ ವಿಶೇಷ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿರುವುದು ಮತ್ತೊಂದು ಹೆಮ್ಮೆ. 2008 ಮತ್ತು 2018ರ ಚುನಾವಣೆಯಲ್ಲಿ ಪರಾಭವಗೊಂಡಿದ್ದು, 2023ರ ಮೇನಲ್ಲಿ ನಡೆಯುವ ಚುನಾವಣೆಗೆ ತಯಾರಿ ನಡೆಸುವ ಮೂಲಕ 12 ಚುನಾವಣೆ ಕಂಡ ಜಿಲ್ಲೆಯ ಮೊದಲ ರಾಜಕಾರಣಿ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಇನ್ನು ಅಖಂಡ ರಾಯಚೂರು ಜಿಲ್ಲೆಯ ಕಾಂಗ್ರೆಸ್‌ನ ಹಿರಿಯ ಎನಿಸಿಕೊಂಡಿರುವ ಗಂಗಾವತಿಯ ಎಚ್.ಜಿ.ರಾಮುಲು ಅವರು ಜಿಲ್ಲೆಯ ರಾಜಕಾರಣಿಗಳ ಪೈಕಿ ಹಿರಿಯರು. ಒಟ್ಟು 7 ಚುನಾವಣೆ ಎದುರಿಸಿದ್ದು, ನಾಲ್ಕು ಬಾರಿ ಸಂಸದರಾಗಿ, ಒಂದು ಸಲ ಶಾಸಕರಾಗಿ ಆಯ್ಕೆಯಾಗಿದ್ದು, ಎರಡು ಬಾರಿ ಪರಾಭವಗೊಂಡಿದ್ದಾರೆ.
1974ರಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮೊದಲ ಬಾರಿ ಎಂಎಲ್‌ಎ ಆದರು. ನಂತರ ರಾಷ್ಟ್ರರಾಜಕಾರಣದತ್ತ ಹೆಚ್ಚು ಒಲವು ತೋರಿದರು. 1980ರಲ್ಲಿ ಕೊಪ್ಪಳ ಲೋಕಸಭೆ ಚುಣಾವಣೆಯಲ್ಲಿ ಗೆದ್ದು ಮೊದಲ ಬಾರಿ ದೆಹಲಿಗೆ ಹಾರಿದರು. 1984ರಲ್ಲಿ ಎರಡನೇ ಬಾರಿಗೆ ಸಂಸದರಾದರು. ಆದರೆ, 1991ರಿಂದ 1998ವರೆಗೆ ಬಸವರಾಜ ಪಾಟೀಲ್ ಅನ್ವರಿಗೆ ಕಾಂಗ್ರೆಸ್ ಮಣೆ ಹಾಕಿದ್ದರಿಂದ ಸ್ಪರ್ಧಾ ಕಣದಿಂದ ದೂರ ಉಳಿದರು. ಮತ್ತೆ 1998, 1999ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸಂಸದರಾಗಿ ದಾಖಲೆ ಬರೆದರು. ನಂತರ ಚುನಾವಣೆ ಸ್ಪರ್ಧೆಯಿಂದ ದೂರ ಉಳಿದಿದ್ದು, ಸದ್ಯ ರಾಜಕೀಯವಾಗಿ ಸಕ್ರಿಯರಾಗಿಲ್ಲದಿದ್ದರೂ ತಮ್ಮ ಪ್ರಭಾವ ಉಳಿಸಿಕೊಂಡಿದ್ದಾರೆ.
ರಾಜವಂಶಸ್ಥ ಶ್ರೀರಂಗ ದೇವರಾಯಲು ಅವರು ಕನಕಗಿರಿ ಹಾಗೂ ಗಂಗಾವತಿ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದು, ಒಟ್ಟು 8 ವಿಧಾನಸಭೆ ಚುನಾವಣೆ ಕಂಡಿದ್ದು, ಐದರಲ್ಲಿ ವಿಜಯದ ಹಾರ ಹಾಕಿಕೊಂಡರೆ, ಮೂರರಲ್ಲಿ ಸೋಲನುಭವಿಸಿದ್ದಾರೆ. 1974ರಲ್ಲಿ ರಾಕಾಒದಿಂದ ಗಂಗಾವತಿಯಲ್ಲಿ ಮೊದಲ ಬಾರಿ ಸ್ಪರ್ಧಿಸಿ ಎಚ್.ಜಿ.ರಾಮುಲು ವಿರುದ್ಧ ಪರಾಭವಗೊಂಡರು. 1978ರಲ್ಲಿ ಜೆಎನ್‌ಪಿಯಿಂದ ಎರಡನೇ ಬಾರಿ ಸೋಲಬೇಕಾಯಿತು.
ಅಷ್ಟರಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರ ಉದಯಿಸಿದ ಕಾರಣ 1983ರಲ್ಲಿ ಕಾಂಗ್ರೆಸ್‌ನಿಂದ ಅಖಾಡಕ್ಕಿಳಿದು ಮೊದಲ ಬಾರಿ ಜಯಭೇರಿ ಬಾರಿಸಿದರು. 1985ರಲ್ಲಿ ಎರಡನೇ ಬಾರಿ ಗೆದ್ದು, 1989ರಲ್ಲಿ ಮತ್ತೆ ಗಂಗಾವತಿಗೆ ಮರಳಿದರು. ಅಲ್ಲಿಂದ 1994 ಮತ್ತು 1999ರ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಲ್ ಗೆಲುವು ದಾಖಲಿಸಿದರು. 2004ರಲ್ಲಿ ಸೋಲನುಭವಿಸಿದ ಬಳಿಕ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದಾರೆ.
ಜಿಲ್ಲೆಯ ಮೊದಲ ಸಂಸದ ಶಿವಮೂರ್ತಿಸ್ವಾಮಿ ಅಳವಂಡಿ ಅವರು 5 ಲೋಕಸಭೆ ಚುನಾವಣೆ ಎದುರಿಸಿದ್ದು, ಎರಡು ಬಾರಿ ಗೆದ್ದಿದ್ದಾರೆ. 1978ರಲ್ಲಿ ರಾಕಾಒ ಪಕ್ಷದಿಂದ ಕೊಪ್ಪಳ ವಿಧನಸಭೆಗೆ ಸ್ಪರ್ಧಿಸಿದರೂ ಶಾಸಕರಾಗುವ ಯೋಗ ಕೂಡಿ ಬರಲಿಲ್ಲ. ಕಾಂಗ್ರೆಸ್‌ನ ಬಸವರಾಜ ಹಿಟ್ನಾಳ್ ಸಹ 6 ಚುನಾಣೆ ಎದುರಿಸಿದ್ದು, 2004ರಲ್ಲಿ ಮೊದಲ ಬಾರಿ ಶಾಸಕರಾದರು. 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದರೂ ಗೆಲುವು ದಕ್ಕಲಿಲ್ಲ.
ಸಂಗಣ್ಣ ಕರಡಿ ಅವರೂ ನಾಲ್ಕು ಬಾರಿ ಲೋಕಸಭೆ ಚುನಾವಣೆ ಎದುರಿಸಿದ್ದು, ಎರಡು ಬಾರಿ ಸಂಸದರಾಗಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ತಂದೆ ಹನುಮಗೌಡ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು, ಎರಡು ಬಾರಿ ಶಾಸಕರಾದರೆ, ಎರಡರಲ್ಲಿ ಪರಾಭವಗೊಂಡಿದ್ದಾರೆ. ಇದೇ ಕ್ಷೇತ್ರದಲ್ಲಿ ಜೆಡಿಎಸ್ ಕಟ್ಟಾಳಾಗಿದ್ದ ಕೆ.ಶರಣಪ್ಪ 1989ರಿಂದ 2013ವರೆಗಿನ 6 ಚುನಾವಣೆಯಲ್ಲಿ ಅಖಾಡದಲ್ಲಿದ್ದರು. 1994ರಲ್ಲಿ ಒಮ್ಮೆ ಮಾತ್ರ ಶಾಸಕರಾಗುವ ಭಾಗ್ಯ ಕಂಡರು.
ಇನ್ನು ಕನಕಗಿರಿಯಲ್ಲಿ ನಾಲ್ಕು, ಗಂಗಾವತಿಯಲ್ಲಿ ಒಂದು ಹಾಗೂ ಒಮ್ಮೆ ಲೋಕಸಭೆ ಚುನಾವಣೆಗೆ ಕಣಕ್ಕಿಳಿದಿದ್ದ ನಾಗಪ್ಪ ಸಾಲೋಣಿ 1994ರಲ್ಲಿ ಒಮ್ಮೆ ಶಾಸಕರಾಗಿ ಸಚಿವರೂ ಆಗಿದ್ದರು. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಸಹ ಕನಕಗಿರಿ ಕ್ಷೇತ್ರದಲ್ಲಿ ನಾಲ್ಕು ಬಾರಿ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿದ್ದು, ಒಮ್ಮೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇನ್ನು ನಾಲ್ಕು ಬಾರಿ ಶಾಸಕ, ಎರಡು ಬಾರಿ ಸಂಸದರಾಗಿರುವ ಕೊಪ್ಪಳದ ಸಂಗಣ್ಣ ಕರಡಿ ಅವರೂ ಈವರೆಗೆ ಒಟ್ಟು 8 ಚುನಾವಣೆ ಎದುರಿಸಿದ್ದಾರೆ. 1994ರಲ್ಲಿ ಪಕ್ಷೇತರರಾಗಿ ವಿಧಾನಸಭೆ ಪ್ರವೇಶಿಸಿದ ಸಂಗಣ್ಣ, 1999ರಲ್ಲಿ ಜೆಡಿಯುನಿಂದ ಎರಡನೇ ಬಾರಿ ಶಾಸಕರಾದರು. 2004ರಲ್ಲಿ ಬಿಜೆಪಿ ಸೇರಿ ಮೊದಲ ಬಾರಿ ಸೋಲನುಭವಿಸಿದರು.
2008ರಲ್ಲಿ ಜೆಡಿಎಸ್‌ನಿಂದ ಮೂರನೇ ಬಾರಿ ಶಾಸಕರಾದರೆ, 2011ರಲ್ಲಿ ಆಪರೇಷನ್ ಕಮಲ ಮೂಲಕ ಉಪ ಚುನಾವಣೆ ಎದುರಿಸಿ ನಾಲ್ಕನೇ ಬಾರಿ ಗೆದ್ದು ಬೀಗಿದರು. 2013ರಲ್ಲಿ ವಿಧಾನಸಭೆ ಚುಣಾವಣೆಯಲ್ಲಿ ಸೋಲನುಭವಿಸಿ ವರ್ಷದ ಬಳಿಕ 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ದೆಹಲಿಗೆ ಹಾರಿದರು. 2019ರಲ್ಲಿ ಎರಡನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಸದ್ಯ ಕೊಪ್ಪಳ ಕ್ಷೇತ್ರದಿಂದ ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ತವಕದಲ್ಲಿದ್ದಾರೆ.