

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಮಂಗಳವಾರ ಶ್ರೀ ರಾಘವೇಂದ್ರಸ್ವಾಮಿಗಳ 403ನೇ ಪಟ್ಟಾಭಿಷೇಕ ಮಹೋತ್ಸವದ ಸಂಭ್ರಮ ಮನೆಮಾಡಿತ್ತು. ಪಟ್ಟಾಭಿಷೇಕ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ರಾಯರ ಅನುಗ್ರಹಕ್ಕೆ ಪಾತ್ರರಾದರು.
ಪಟ್ಟಾಭಿಷೇಕ ಮಹೋತ್ಸವ ನಿಮಿತ್ತ ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿದ ನಂತರದಲ್ಲಿ ಶ್ರೀಮಠದ ಪ್ರಾಕಾರದಲ್ಲಿ ರಾಯರ ಪಾದುಕೆಗಳಿಗೆ ಕನಕಾಭಿಷೇಕ, ಮುತ್ತಿನ ಅಭಿಷೇಕ ನೆರವೇರಿಸಿ ಭಕ್ತಿ ಸಮರ್ಪಣೆ ಮಾಡಿದ ನಂತರ ರಾಯರ ಪಾದುಕೆಗಳನ್ನಿಟ್ಟು ಸುವರ್ಣ ರಥೋತ್ಸವ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮಠ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ, ಜ್ಞಾನ ಸಂಸ್ಥಾಪನೆಗಾಗಿ ಸ್ಥಾಪನೆಗೊಂಡ ಪೀಠ ಶ್ರೀ ರಾಘವೇಂದ್ರಸ್ವಾಮಿ ಮಠವಾಗಿದ್ದು, ಹಲವಾರು ಪೀಠಾಪತಿಗಳು ಶ್ರೀಮಠವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.
ಎಲ್ಲ ವಿದ್ಯೆ, ಆಧ್ಯಾತ್ಮಿಕ ಸಂಪತ್ತು ಹೊಂದಿದ್ದ ರಾಯರು ಆಸ್ತಿಕ ಪರಂಪರೆಯನ್ನು ಉದ್ಧಾರ ಮಾಡುವುದರ ಜತೆಗೆ ನಾಸ್ತಿಕರನ್ನು ಪರಿವರ್ತನೆ ಮಾಡುವ ಮೂಲಕ ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ. ಭಕ್ತರ ಒಳಿತಿಗಾಗಿ ತಮ್ಮ ತಪಸ್ಸು ಧಾರೆ ಎರೆದು ಭಗವಂತನ ಅನುಗ್ರಹ ಸಿಗುವಂತೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ಸಹಾಯಕ ಆಡಳಿತಾಕಾರಿ ಮಾಧವ ಶೆಟ್ಟಿ, ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ ಡಾ.ಎನ್.ವಾದಿರಾಜಾಚಾರ್ ಹಾಗೂ ಭಕ್ತರು ಉಪಸ್ಥಿತರಿದ್ದರು.