ರಾಯರ ಪರಮಭಕ್ತ ಪುನೀತ್ ರಾಜಕುಮಾರ - ಬಿಸಿಲು ನಾಡಲ್ಲಿ ಅಗಲಿದ ನಟನ ನೆನಪುಗಳು

Punith Remember with Mantralaya
ನಟ ಪುನೀತ್ ರಾಜಕುಮಾರ ಪ್ರಸಕ್ತ ವರ್ಷದ ಏ.5ರಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಸನ್ಮಾನಿಸಿ, ಆಶೀರ್ವದಿಸಿದ ಸಂದರ್ಭ.
Published on

ರಾಯಚೂರು: ಡಾ.ರಾಜಕುಮಾರರಂತೆ ಅವರ ಪುತ್ರ ಪುನೀತ್ ರಾಜಕುಮಾರ ಕೂಡ ಶ್ರೀ ರಾಘವೇಂದ್ರಸ್ವಾಮಿಗಳ ಪರಮ ಭಕ್ತರಾಗಿದ್ದರು.

ಹಲವು ಬಾರಿ ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಆಗಮಿಸಿ ಶ್ರೀಗುರು ರಾಯರ ದರ್ಶನ ಪಡೆದು ಹೋಗುತ್ತಿದ್ದರು. ಮಂತ್ರಾಲಯಕ್ಕೆ ಬಂದಾಗೊಮ್ಮೆ ರಾಯರ ಮೂಲ ಬೃಂದಾವನದ ಮುಂದೆ ಕುಳಿತು ಧ್ಯಾನ ಮಾಡುತ್ತಿದ್ದ ಅವರು, ತಾವೊಬ್ಬ ದೊಡ್ಡ ನಟ ಎನ್ನುವುದನ್ನು ಮರೆತು ಸಾಮಾನ್ಯರಂತೆ ರಾಯರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದರು.

ಡಾ.ರಾಜಕುಮಾರ ನಿಧನ ನಂತರದಲ್ಲಿ ಶ್ರೀಮಠದಿಂದ ಮರಣೋತ್ತರವಾಗಿ ನೀಡಲಾದ ‘ಶ್ರೀ ರಾಘವೇಂದ್ರ ಅನುಗ್ರಹ’ ಪ್ರಶಸ್ತಿ ಸ್ವೀಕಾರಕ್ಕೆ ಮಂತ್ರಾಲಯಕ್ಕೆ ಕುಟುಂಬಸ್ಥರೊಂದಿಗೆ ಆಗಮಿಸಿದ್ದ ಪುನೀತ್, 2016ರಲ್ಲಿ ದೊಡ್ಮನೆ ಹುಡುಗ ಸಿನೆಮಾ ಬಿಡುಗಡೆ ನಂತರವೂ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ನಂತರ 2020ರಲ್ಲಿ ಶ್ರೀಮಠದಿಂದ ನೀಡಲಾದ 'ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ’ ಸ್ವೀಕರಿಸಲು ಮಂತ್ರಾಲಯಕ್ಕೆ ಆಗಮಿಸಿದ್ದರು. ಈ ಸಂದರ್ಭ ಮಂತ್ರಾಲಯಕ್ಕೂ ತಮ್ಮ ಕುಟುಂಬಕ್ಕೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ಮಾತನಾಡಿದ್ದರು.

ಅದಾದ ನಂತರದಲ್ಲಿ ನಟ ಜಗ್ಗೇಶ ಜತೆಗೆ ಪ್ರಸಕ್ತ ವರ್ಷದ ಏ.5ರಂದು ಮಂತ್ರಾಲಯಕ್ಕೆ ಆಗಮಿಸಿ ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಪುನೀತ್‌ರನ್ನು ಸನ್ಮಾನಿಸಿ, ಆಶೀರ್ವದಿಸಿದ್ದರು. ಅದು ಅವರ ಮಂತ್ರಾಲಯಕ್ಕೆ ನೀಡಿದ್ದ ಕೊನೆಯ ಭೇಟಿಯಾಗಿತ್ತು.

2016ರಲ್ಲಿ ದೊಡ್ಮನೆ ಹುಡುಗ ಪ್ರಮೋಷನ್‌ಗಾಗಿ ರಾಯಚೂರಿಗೆ ಪುನೀತ್ ಆಗಮಿಸಿದ್ದರು. ಆ ಸಂದರ್ಭದಲ್ಲಿ ಎಸ್‌ಎನ್‌ಟಿ ಚಿತ್ರಮಂದಿರದ ಮೇಲೆ ನಿಂತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅಲ್ಲಿನ ಜನರ ಅಭಿಮಾನಕ್ಕೆ ಋಣಿಯಾಗುವುದಾಗಿ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net