

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದಲ್ಲಿ ಸೈನಿಕನಾಗಿ, ರಾಣಿ ಚನ್ನಮ್ಮಳ ಬಲಗೈ ಬಂಟನಾಗಿ ಕಿತ್ತೂರು ಸಂಸ್ಥಾನದ ಉಳಿವಿಗೆ ಬ್ರಿಟಿಷರ ವಿರುದ್ಧ ಹೋರಾಡಿದ ಪರಾಕ್ರಮಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ ಹಾಗೂ ಕಲ್ಲಿನ ಕಿರು ಕೋಟೆಯನ್ನು ಸೋಮವಾರ ಅನಾವರಣಗೊಳಿಸಿ ಅವರು ಮಾತನಾಡಿದರು. ಕಿತ್ತೂರು ಸಂಸ್ಥಾನ ಬ್ರಿಟಿಷರ ವಿರುದ್ಧ ಮೊದಲ ಯುದ್ಧದಲ್ಲಿ ಜಯ ಗಳಿಸಿತ್ತು. ಬಳಿಕ ನಮ್ಮವರ ಕುತಂತ್ರದಿಂದ ಎರಡನೇ ಬಾರಿ ಕಿತ್ತೂರಿಗೆ ಸೋಲಾಗುತ್ತದೆ. ಸೋಲಿನ ಬಳಿಕ ರಾಣಿ ಚನ್ನಮ್ಮ ಅವರನ್ನು ಬ್ರಿಟಿಷರು ಸೆರೆವಾಸದಲ್ಲಿ ಇಡುತ್ತಾರೆ. ಆದರೆ, ಅದಕ್ಕೆ ಬಗ್ಗದೆ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಏಕಾಂಗಿ ಹೋರಾಟ ಮುಂದುವರಿಸುತ್ತಾರೆ. ಸಂಗೊಳ್ಳಿ ರಾಯಣ್ಣ ಮಹಾನ್ ದೇಶಪ್ರೇಮಿ. ರಾಯಣ್ಣನ ದೇಶಪ್ರೇಮ ನಮ್ಮೆಲ್ಲರಿಗೂ ಪ್ರೇರಣೆ. ಅವರ ಹೆಸರು ಸದಾ ನಮ್ಮೊಂದಿಗೆ ಇರಬೇಕು. ಈ ನಿಟ್ಟಿನಲ್ಲಿ ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ಹಾಗೂ ರಾಕ್ ಗಾರ್ಡನ್ ನಿರ್ಮಾಣ ಮಾಡಲಾಗಿದೆ ಎಂದರು.
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಏಕಕಾಲಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಲ್ಕು ಪ್ರತಿಮೆಗಳನ್ನು ಅನಾವರಣಗೊಳಿಸುತ್ತಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ಪೀಳಿಗೆ ಸಂಗೊಳ್ಳಿ ರಾಯಣ್ಣ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ರಾಮದುರ್ಗ ಶಾಸಕ ಅಶೋಕ ಪಟ್ಟಣ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಇತರರಿದ್ದರು.
ತೆರೆದ ವಾಹನದಲ್ಲಿ ಸಿಎಂ ಸಂಚಾರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರೆದ ವಾಹನದಲ್ಲಿ ಕೌಜಲಗಿ ಗ್ರಾಮದ ಪ್ರಾರಂಭದ ಬೀದಿಯಿಂದ ಗ್ರಾಮದಲ್ಲಿ ನಿರ್ಮಿಸಲಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯವರೆಗೂ ಸಂಚರಿಸಿದರು. ಮೆರವಣಿಗೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇಷಧಾರಿಗಳು, ಡೊಳ್ಳು ಕುಣಿತ ಸೇರಿ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು. ಕುಂಭ ಹೊತ್ತ ಮಹಿಳೆಯರು ಪಾಲ್ಗೊಂಡಿದ್ದರು. ಕೌಜಲಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.