ರಾಯಣ್ಣ ಪ್ರತಿಮೆ ತೆರವು, ಪೊಲೀಸರೊಂದಿಗೆ ವಾಗ್ವಾದ

15 Jaggu 1-Web
ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಶುಕ್ರವಾರ ತಡರಾತ್ರಿ ಗ್ರಾಮದಲ್ಲಿ ನಡೆದ ಗಲಾಟೆ ದೃಶ್ಯ.
Published on

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಸ್ಥಳೀಯರು ಮತ್ತು ಪೊಲೀಸರ ಮಧ್ಯೆ ಶುಕ್ರವಾರ ತಡರಾತ್ರಿ ಗಲಾಟೆ ನಡೆದಿದೆ.

ಪೀರನವಾಡಿ ಗ್ರಾಮ ವೃತ್ತದಲ್ಲಿ ಸ್ಥಳೀಯರು ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆದರೆ, ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ಪಡೆಯದ್ದರಿಂದ ಪೊಲೀಸರು ಪ್ರತಿಮೆ ತೆರವುಗೊಳಿಸಿದ್ದರು.

ಇದನ್ನು ಖಂಡಿಸಿ ಸ್ಥಳೀಯರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು, ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾದರು. ಆದರೆ, ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಅಲ್ಲದೆ, ಕನ್ನಡಪರ ಸಂಘಟನೆಗಳ 15ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೀರನವಾಡಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪೀರನವಾಡಿ ನಾಕಾದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ 2018ರಲ್ಲಿ ಗ್ರಾಪಂನಲ್ಲಿ ಠರಾವು ಪಾಸು ಮಾಡಲಾಗಿದೆ. ಆದರೆ, 150 ಅಡಿ ಅಂತರದಲ್ಲಿಯೇ ಛತ್ರಪತಿ ಶಿವಾಜಿ ಮೂರ್ತಿ ಇರುವುದರಿಂದ, ಅಲ್ಲಿಯೇ ಇನ್ನೊಂದು ಮೂರ್ತಿ ಬೇಡ ಎಂದು ಶಿವಾಜಿಯ ಕೆಲ ಅನುಯಾಯಿಗಳು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು ಎನ್ನಲಾಗಿದೆ.

ಅನುಮತಿ ಪಡೆಯದೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ಹೀಗಾಗಿ ಪುತ್ಥಳಿ ತೆರವುಗೊಳಿಸಿದ್ದೇವೆ. | ಕೆ.ತ್ಯಾಗರಾಜನ್ ಬೆಳಗಾವಿ ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net