ಸಾಧಕರಿಗೆ ರಾಯಣ್ಣ, ಚನ್ನಮ್ಮ ಪ್ರಶಸ್ತಿ ಪ್ರದಾನ

New Rayanna New 100
Published on

ಹುಬ್ಬಳ್ಳಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿ ಅಂಗವಾಗಿ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಹಾಗೂ ವೀರರಾಣಿ ಕಿತ್ತೂರ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪತ್ರಿಕಾ ರಂಗದಲ್ಲಿ ವಿಜಯವಾಣಿಯ ಹಿರಿಯ ಉಪ ಸಂಪಾದಕರ ದೀಪಕ ತಲವಾಯಿ, ಪುಟವಿನ್ಯಾಸಕಾರ ಮಲ್ಲಿಕಾರ್ಜುನ ಪಿಳ್ಳೆ ಸೇರಿದಂತೆ ವಿವಿಧ ಪತ್ರಿಕೆಗಳ 11 ಸಾಧಕರಿಗೆ, ವೈದ್ಯಕೀಯ ಕ್ಷೇತ್ರದ 8 ಸಾಧಕರಿಗೆ, ಸಹಕಾರ ಕ್ಷೇತ್ರದ ಮೂವರು ಸಾಧಕರಿಗೆ, ಅಂಚೆ ಇಲಾಖೆಯ ಇಬ್ಬರಿಗೆ, ಕ್ರೀಡಾ ವಿಭಾಗದ ನಾಲ್ವರಿಗೆಇಬ್ಬರು ಕಲಾವಿದರಿಗೆ, ಸಾರಿಗೆ ಇಲಾಖೆಯ 10 ಜನರಿಗೆ, ಪೊಲೀಸ್ ಇಲಾಖೆಯ 12 ಜನರಿಗೆ, 22 ಜನ ಸಮಾಜ ಸೇವಕರಿಗೆ ಈ ಬಾರಿಯ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ನೀಡಲಾಯಿತು. ವಿವಿಧ ಕ್ಷೇತ್ರಗಳ 20 ಮಹಿಳೆಯರಿಗೆ ವೀರರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಚ್.ಎಂ. ರೇವಣ್ಣ, ಸ್ವಾಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ ಸಂಗೊಳ್ಳಿ ರಾಯಣ್ಣನ ದೇಶಪ್ರೇಮವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ದೇಶದ ಮೇಲೆ ಚ್ಯುತಿ ಬಂದಾಗ ಭಾರತೀಯರೆಲ್ಲ ಒಂದಾಗಿ ದೇಶಪ್ರೇಮ ಮೆರೆಯಬೇಕು ಎಂದು ಹೇಳಿದರು.

ಕಿತ್ತೂರ ಸಂಸ್ಥಾನವನ್ನು ಕಾಪಾಡುವಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಮಹತ್ವದ್ದಾಗಿದೆ. ರಾಣಿ ಚನ್ನಮ್ಮನವರ ಬಲಗೈ ಬಂಟನಾಗಿ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ್ದರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ, ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಸಂಗೊಳ್ಳಿ ರಾಯಣ್ಣ ಮತ್ತು ವೀರರಾಣಿ ಕಿತ್ತೂರ ಚನ್ನಮ್ಮಳ ಹೆಸರಿಡಬೇಕೆಂಬ ಬಹಳ ದಿನಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.

ಬ್ಯಾಹಟ್ಟಿ ಗ್ರಾಮದ ಕುಸ್ತಿ ಪೈಲ್ವಾನ ಯೋಗೇಶ ಬೆಂಗೇರಿ ಇವರು ಸಂಗ್ರಾಣಿ ಕಲ್ಲು ಎತ್ತುವ ಪ್ರದರ್ಶನ ನೀಡಿದರು. ಮನಸೂರಿನ ಶ್ರೀ ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು.

ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ನಾಗರಾಜ ಗೌರಿ, ಸದಾನಂದ ಡಂಗನವರ, ವಿಜಯಕುಮಾರ ಅಪ್ಪಾಜಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಗದೀಶ ರಿತ್ತಿ, ಸುನೀಲ ರೇವಣಕರ, ಲೀಲಾ ಸಿಂದಗಿ, ಸರೋಜಾ ಛಬ್ಬಿ, ಬಾಳಮ್ಮ ಜಂಗಿನವರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net