ಸಂಗೊಳ್ಳಿ ರಾಯಣ್ಣ ಸಮುದಾಯ ಭವನ ನಿರ್ಮಾಣ

rayanna
Published on

ಕುಶಾಲನಗರ:

ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ವತಿಯಿಂದ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಭವನ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಲಾಯಿತು. 5 ಸೆಂಟ್ ಜಾಗದಲ್ಲಿ 5 ಲಕ್ಷ ಅನುದಾನಲ್ಲಿ ನಿರ್ಮಾಣಗೊಳ್ಳುವ ಭವನದ ಜಾಗಕ್ಕೆ ಸ್ಥಳದಾನಿ ಕೆ.ಕೆ. ದೊಡ್ಡಯ್ಯ ದಂಪತಿ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದರು.

ಸಂಘದ ಗೌರವಾಧ್ಯಕ್ಷ ಸಿ.ಕೆ. ಉದಯಕುಮಾರ್ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಈ ಸಂಘ ಹಲವು ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು ಅತ್ಯವಶ್ಯಕವಾಗಿದ್ದ ಭವನ ನಿರ್ಮಾಣ ಮಾಡಲು ಹಿಂದಿನ ಸಂಸದರ ಅನುದಾನದಡಿ 5 ಲಕ್ಷ ರೂ. ಒದಗಿಸಲಾಗಿದೆ. ಶಾಸಕ ಡಾ. ಮಂತರ್ ಗೌಡ 10 ಲಕ್ಷ ರೂ. ಅನುದಾನವವನ್ನು ಭವನಕ್ಕೆ ಒದಗಿಸುವ ಭರವಸೆ ನೀಡಿದ್ದಾರೆ ಎಂದರಲ್ಲದೆ ಸಮುದಾಯ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಡಿ.ಆರ್. ಪ್ರಭಾಕರ್ ಮಾತನಾಡಿ, ಕೊಡಗಿನಲ್ಲಿ ಕುರುಬ ಸಮಾಜ ಸುಮಾರು 12000 ಜನ ಸಂಖ್ಯೆ ಹೊಂದಿದ್ದು ಸಮಾಜದ ಕೆಲವೊಂದು ಕಾರ್ಯ ಚಟುವಟಿಕೆಗಳಿಗೆ ಒಗ್ಗೂಡಲು ಭವನದ ಕೊರತೆಯಿತ್ತು. ಸಂಘದ ಹೆಸರಿನಲ್ಲಿರುವ ಜಾಗಕ್ಕೆ ಮೈಸೂರು ಮತ್ತು ಕೊಡಗು ಜಿಲ್ಲೆಯ ಹಿಂದಿನ ಸಂಸದ ಪ್ರತಾಪ್ ಸಿಂಹ 5 ಲಕ್ಷ ರೂ ಒದಗಿಸಿದ್ದರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಸಹಕಾರ ನೀಡಿದ್ದಾರೆ. ಸಮಾಜದ ಎಲ್ಲಾ ಬಾಂಧವರು ಭವನವನ್ನು ನಿರ್ಮಾಣ ಮಾಡಲು ಕೈಜೋಡಿಸಬೇಕು ಎಂದು ಹೇಳಿದರು.

ಸಂಘದ ರಾಜ್ಯ ನಿರ್ದೇಶಕಿ ಹೇಮಲತಾ ಮಂಜುನಾಥ್, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್, ಕಾಂಗ್ರೆಸ್ ವಲಯ ಅಧ್ಯಕ್ಷ ಅನಂತ್, ಸಂಘದ ಕಾರ್ಯದರ್ಶಿ ಮಂಜುನಾಥ್, ಮುಖಂಡ ಪ್ರಸನ್ನ, ಪ್ರಮುಖರಾದ ರವಿ, ಚಿಕ್ಕಯ್ಯ, ಪುಟ್ಟಸ್ವಾಮಿ, ಸ್ವಾಮಿ. ದಿನೇಶ್, ರಾಧಾ, ಮಲ್ಲೇಶ್, ಮಾದೇವ, ಕೆ.ಕೆ. ಕೃಷ್ಣ, ರಮೇಶ್, ರವಿ, ಮಂಜುನಾಥ್, ಡಿ. ರಾಜು, ಭರಮಣ್ಣ ಬೆಟಗೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net