

ಹುಬ್ಬಳ್ಳಿ: ಇಲ್ಲಿಯ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರು ಇಡಬೇಕೆಂದು ಬಹಳ ದಿನದಿಂದ ಹೋರಾಟ ನಡೆಯುತ್ತಿದೆ. ರಾಜ್ಯ ಸರ್ಕಾರ ಕೂಡ ಇದಕ್ಕೆ ಅನುಮೋದನೆ ನೀಡಿದ್ದು, ಈ ಪ್ರಸ್ತಾವಣೆ ಯಾವ ಹಂತದಲ್ಲಿದೆ ಎಂಬುದರ ವಿವರ ನೀಡಿದರೆ ಕೇಂದ್ರದ ಗಮನ ಸೆಳೆಯಲಾಗುವುದು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿಯ ಚನ್ನಮ್ಮ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಹಿತ ರಕ್ಷಣಾ ಸಮಿತಿ ಧಾರವಾಡ ಜಿಲ್ಲಾ ಟಕದ ವತಿಯಿಂದ ಏರ್ಪಡಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಸಮಾರಂಭದಲ್ಲಿ ಸಾಧಕರಿಗೆ ರಾಯಣ್ಣ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ನಾಮಕರಣ ಕುರಿತು ಸರ್ಕಾರ ಈಗಾಗಲೇ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಇದರ ಸಮಗ್ರ ವಿವರ ನೀಡಿದರೆ ಪ್ರಧಾನಿ ಮತ್ತು ವಿಮಾನಯಾನ ಸಚಿವರ ಗಮನಕ್ಕೆ ತಂದು ಮನವರಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚನ್ನಮ್ಮ ಅವರು ಇಂದಿನ ಯುವಸಮುದಾಯಕ್ಕೆ ಸ್ಪೂರ್ತಿದಾಯಕವಾಗಿದ್ದಾರೆ. ಅವರ ಯೋಶೋಗಾಥೆಯನ್ನು ನಮ್ಮ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ನಿರಂತರ ನಡೆಯಲಿ ಎಂದು ಆಶಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಸ್ವಾತಂತ್ರೊತ್ಸವ ದಿನವೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿ ಆಚರಿಸುತ್ತಿರುವುದು ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ರಾಯಣ್ಣನ ಶೌರ್ಯ ಸಾಹಸಗಳನ್ನು ಯುವ ಪೀಳಿಗೆಗೆ ಮನದಟ್ಟು ಮಾಡುವ ಕೆಲಸ ಇಂದು ಆಗಬೇಕಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 11 ಜನ ಮಹಿಳೆಯರಿಗೆ ವೀರರಾಣಿ ಚನ್ನಮ್ಮ ಪ್ರಶಸ್ತಿ, 40ಕ್ಕೂ ಹೆಚ್ಚು ಜನ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮನಸೂರಿನ ರೇವಣಸಿದ್ದೇಶ್ವರ ಮಠದ ಶ್ರೀಬಸವರಾಜ ದೇವರು, ಮನಗುಂಡಿಯ ಶ್ರೀಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎನ್.ಎಚ್. ಕೋನರಡ್ಡಿ, ಸಮಿತಿಯ ಶಿವಾನಂದ ಮುತ್ತಣ್ಣವರ, ಶಿವಾನಂದ ಕರಿಗಾರ, ಅಡಿವೆಪ್ಪ ಶಿವಳ್ಳಿ, ಮಲ್ಲಿಕಾರ್ಜುನ ತಾಲೂರ, ಅಲ್ತಾಪ್ ಹಳ್ಳೂರ, ಡಾ. ಶರಣಪ್ಪ ಕೊಟಗಿ, ಮಲ್ಲಿಕಾರ್ಜುನ ಸಾಹುಕಾರ, ನಾಗೇಶ ಕಲಬುರಗಿ ಇದ್ದರು.
ಗಮನ ಸೆಳೆದ ಕಸರತ್ತು: ಕಾಶೀಂಸಾಬ ಅಣ್ಣಿಗೇರಿ ಹಾಗೂ ಇತರರು ಪ್ರದಶಿರ್ಸಿದ ಸಾಂಗ್ರಾಣಿ ಕಲ್ಲು ಎತ್ತುವ ಶಕ್ತಿ ಪ್ರದರ್ಶನವು ಗಮನ ಸೆಳೆಯಿತು. 40 ಕೆಜಿಯಿಂದ 125 ಕೆಜಿ ವರೆಗಿನ ಸಾಂಗ್ರಾಣಿ, ದುಂಡಿ ಕಲ್ಲುಗಳನ್ನು ಎತ್ತುವ ಮೂಲಕ ನೋಡುಗರ ಮನಸೂರೆಗೊಂಡರು.