

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಸರ್ಕಾರಿ ಪ್ರಾಥಮಿಕ ಶಾಲೆ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದ್ದು, ಕಂದಾಯ ಅಧಿಕಾರಿಗಳು ಸೋಮವಾರ ಸರ್ವೇ ನಡೆಸಿ ಗಡಿ ಗುರುತಿಸಿದ್ದಾರೆ.
ದಿ.ಆರ್.ಜಿ.ನಾರಾಯಣರೆಡ್ಡಿ ರಾಯಲ್ಪಾಡು ಗ್ರಾಮದ ಸರ್ವೇ ನಂ.387ರಲ್ಲಿ ಒಂದು ಎಕರೆ 20 ಗುಂಟೆ ಜಮೀನನ್ನು 1955ರ ಆ.7ರಂದು ಶಾಲೆಗೆ ದಾನ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಆರ್.ಜಿ.ನಾರಾಯಣರೆಡ್ಡಿ ಅವರ ಹೆಸರಿನಲ್ಲಿಯೇ ಇದ್ದು, ಶಾಲೆಗೆ ದಾನವಾಗಿ ನೀಡಿದ ಜಮೀನಿಗೆ ಚೆಕ್ಕುಬಂದಿ ಸ್ಪಷ್ಟವಾಗಿರಲಿಲ್ಲ. ಕೇವಲ ಪೂರ್ವಭಾಗದ ಕಡೆಗೆ ಎಂದಿತ್ತು.
ನಂತರ ದ್ರಾವಿಡ ವಿಮೋಚನಾ ಸಂದಿಂದ ಶಾಲಾ ಜಮೀನಿಗೆ ಚೆಕ್ಕುಬಂದಿ ಗುರುತಿಸಿ ಖಾತೆ ವಾಡಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ವೇ ನಡೆಸಿ ಜಾಗ ಉಳಿಸುವಂತೆ ಸೂಚನೆ ನೀಡಿದ್ದರು.
ಅದರಂತೆ ಕಂದಾಯ ಇಲಾಖೆಯವರು ಸರ್ವೇ ಕಾರ್ಯ ನಡೆಸಿ ಶಾಲಾ ಜಮೀನಿನ ಚೆಕ್ಕುಬಂದಿ ಗುರುತಿಸಿದ್ದಾರೆ. ಶಾಲಾ ಜಮೀನು ಉಳಿಸಲು ಶ್ರಮಿಸಿದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಶ್ರೀನಿವಾಸಪುರ ಸರ್ಕಾರಿ ನೌಕರರ ಸಂದ ಅಧ್ಯಕ್ಷ ಎಂ.ಬೈರೇಗೌಡ, ಮುಖಂಡ ಸಿಮೆಂಟ್ ನಾರಾಯಣಸ್ವಾಮಿ ಅವರಿಗೆ ಅರ್ಜಿದಾರ ಕೆ.ಎಂ.ಅನಂತಕೀರ್ತಿ ಕೃತಜ್ಞತೆ ತಿಳಿಸಿದ್ದಾರೆ.