ಕರ್ನಾಟಕ ಮೂಲದ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ ಸಮಿತಿ ವತಿಯಿಂದ ಐರ್ಲೆಂಡ್‌ನಲ್ಲಿ ಮೊದಲ ಬಾರಿಗೆ ರಾಯರ ಆರಾಧನೆ

23
Published on

ಮೈಸೂರು: ಕರ್ನಾಟಕ ಮೂಲದ ಪವನ್ ಗುರುರಾಜ ರಾವ್ ನೇತೃತ್ವದಲ್ಲಿ ಗ್ರೇಟ್ ಬ್ರಿಟನ್ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ ಸಮಿತಿ ವತಿಯಿಂದ ಐರ್ಲೆಂಡ್‌ನಲ್ಲಿ ಮೊದಲ ಬಾರಿಗೆ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ಐರ್ಲೆಂಡಿನ ಲಿಮೆರಿಕ್ ನಗರದ ಅಹೆನ್ ಜಿಎಎ ಕ್ಲಬ್‌ನಲ್ಲಿ (ಕಮ್ಯೂನಿಟಿ ಹಾಲ್) ಇತ್ತೀಚೆಗೆ ಆಯೋಜಿಸಿದ್ದ ಆರಾಧನಾ ಮಹೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಭಕ್ತಿ ಭಾವ ಮೆರೆದಿದ್ದಾರೆ.

ಪ್ರಾರ್ಥನೆ, ಶ್ರೀ ಪೂರ್ಣಬೋಧ ಶ್ರೀ ರಾಘವೇಂದ್ರ ಸ್ತೋತ್ರ, ಕನಕಾಭಿಷೇಕ, ಪಂಚಾಮೃತ ಅಭಿಷೇಕ, ಪಲ್ಲಕ್ಕಿ ಉತ್ಸವ, ರಾಯರ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದ್ದು ವಿಶೇಷವಾಗಿತ್ತು. ಸಮಿತಿಯ ಶ್ರೀಹರಿ, ಪ್ರಹ್ಲಾದ್, ಗೋಪಿ ಆಚಾರ್ಯ, ಗುರುರಾಜ, ಕೃಷ್ಣಮೂರ್ತಿ, ಮೋಹನ್‌ಕುಮಾರ್, ಸಚಿನ್ ಕದಡಿ ಇತರರು ಆರಾಧನಾ ಮಹೋತ್ಸವದ ನೇತೃತ್ವ ವಹಿಸಿದ್ದರು.

ಈ ಸಂದರ್ಭ ಆರಾಧನೆ ಆಯೋಜಕ ಪವನ್ ಗುರುರಾಜ ರಾವ್ ಮಾತನಾಡಿ, ಪ್ರತಿವರ್ಷ ರಾಯರ ಆರಾಧನೆಗೆ ಮಠಕ್ಕೆ ಹೋಗಿ ಪೂಜೆ ಸಲ್ಲಿಸುವುದು ಅಭ್ಯಾಸವಾಗಿತ್ತು. ಈ ವರ್ಷ ನಾನು ಐರ್ಲೆಂಡ್‌ನಲ್ಲಿ ನೆಲೆಸಿರುವ ಕಾರಣ ರಾಯರ ದರ್ಶನ ಸಿಗುವುದಿಲ್ಲ ಎಂದುಕೊಂಡಿದ್ದೆ. ಅಷ್ಟ್ಟರಲ್ಲಿ ರಾಯರೇ ಐರ್ಲೆಂಡ್‌ಗೆ ಬಂದು ನಮ್ಮೆಲ್ಲರನ್ನು ಅನುಗ್ರಹಿಸಿದ್ದಾರೆ. ಅದೊಂದು ಕ್ಷಣ ರಾಯರ ಪವಾಡವೇ ಆಯಿತು ಎನಿಸಿತು. ಈ ಆರಾಧನಾ ಕಾರ್ಯಕ್ರಮದಿಂದ ಐರ್ಲೆಂಡ್‌ನಲ್ಲಿ ಕನ್ನಡಿಗರೆಲ್ಲರೂ ಒಂದುಗೂಡಿದಂತಾಗಿದೆ. ಇದರಿಂದ ನಮ್ಮಲ್ಲಿ ಹಿಂದು ಧರ್ಮದ ಪರಂಪರೆ, ಸಂಸ್ಕೃತಿ ಬಗೆಗಿನ ಗೌರವ ಹೆಚ್ಚಾಯಿತು ಎಂದರು.

ಡಿ.ಪ್ರೀತಂ ಬಾಬು ಮಾತನಾಡಿ, ಕನ್ನಡಿಗರ ಹಬ್ಬ, ಉತ್ಸವ, ಆರಾಧನೆಗಳಿಗೆ ಈಗಲೂ ಸಾಗರದಾಚೆ ವಿಶೇಷ ಮಹತ್ವವಿದೆ ಎಂಬುದಕ್ಕೆ ರಾಯರ ಆರಾಧನೆಯೇ ಸಾಕ್ಷಿಯಾಯಿತು. ಇಂತಹ ಪುಣ್ಯಕಾರ್ಯಗಳು ಐರ್ಲೆಂಡಿನಲ್ಲೂ ನೆರವೇರುತ್ತಿರುವುದು ನಮ್ಮ ಪುಣ್ಯವೇ ಸರಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net