

ಲೋಕಾಪುರ: ಪಟ್ಟಣದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 353ನೇ ಆರಾಧನಾ ಮಹೋತ್ಸವ ನಿಮಿತ್ತ ಆ. 20 ರಿಂದ ಆ. 22ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆ. 20 ಪೂರ್ವಾರಾಧನೆ ನಿಮಿತ್ತ ಬೃಂದಾವನಕ್ಕೆ ಕಾಕಡಾರತಿ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ನಿರ್ಮಾಲ್ಯ ವಿಸರ್ಜನೆ, ರಜತ ಅಲಂಕಾರ ವಿಶೇಷ ಪೂಜೆ, ಮಹಾಮಂಗಳಾರತಿ, ಮಹಾಪ್ರಸಾದ, ಸಂಜೆ 6 ಗಂಟೆಗೆ ಧಾರವಾಡದ ದೀಪಾ ವಿ. ಕಟ್ಟಿ ಅವರಿಂದ ಸಂಗೀತ, ನಂತರ ರಥೋತ್ಸವ, ಹರಿವಾಣ, ತೊಟ್ಟಿಲು ಸೇವೆ, ಸ್ವಸ್ತಿವಾಚನ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಆ. 21ರಂದು ವಧ್ಯಾರಾಧನೆ, ಆ. 22 ರಂದು ಉತ್ತರಾರಾಧನೆ ನಿಮಿತ್ತ ವಿಶೇಷ ಪೂಜೆಗಳು ನೆರವೇರಲಿವೆ. ಅಲ್ಲದೆ, ಹಸ್ತೋದಕ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ, ಸ್ಥಳೀಯ ಕಲಾವಿದರಿಂದ ತಾರತಮ್ಯ ಭಜನೆ, ಸಂಜೆ 6 ಗಂಟೆಗೆ ಬಾಗಲಕೋಟೆಯ ಪಂ. ಬಿಂದುಮಾಧವಾಚಾರ್ಯ ನಾಗಸಂಪಗಿ ಅವರಿಂದ ಪ್ರವಚನ ನಡೆಯಲಿದೆ.
ಮಹಾ ಮಂಗಳಾರತಿಯೊಂದಿಗೆ ಆರಾಧನಾ ಮಹೋತ್ಸವಕ್ಕೆ ಸಂಭ್ರಮದ ಸಮಾಪ್ತಿಯಾಗಲಿದೆ. ಆ.19 ರಂದು ಬೆಳಗ್ಗೆ 8 ಗಂಟೆಗೆ ವೆಂಕಟೇಶ್ವರ ದೇವಸ್ಥಾನದಲ್ಲಿ (ಶ್ರಾವಣಿ ನಿತ್ಯ ನೂತನ ಉಪಾಕರ್ಮ) ಕಾರ್ಯಕ್ರಮ ಏರ್ಪಡಿಸಲಾಗಿದೆ. ನಿತ್ಯವೂ ಸ್ಥಳೀಯ ರಾಘವೇಂದ್ರ ಸೇವಾ ಸಮಿತಿ, ಗುರುಸಾರ್ವಭೌಮ ಯುವಕ ಮಂಡಳಿ, ಗಾಯತ್ರಿ ಭಜನಾ ಮಂಡಳಿಯಿಂದ ಶ್ರೀಹರಿ, ರಾಯರ, ದಾಸರ ಮುಖ್ಯ ಪ್ರಾಣದೇವರ ಕುರಿತಾದ ಭಕ್ತಿ ಗೀತೆಗಳು ನಡೆಯಲಿವೆ ಎಂದು ಶ್ರೀಮಠದ ಅಧ್ಯಕ್ಷ ವಿ.ಎಸ್. ಕುಲಕರ್ಣಿ, ಕಾರ್ಯದರ್ಶಿ ಲಕ್ಷ್ಮೀಕಾಂತ ದೇಶಪಾಂಡೆ ತಿಳಿಸಿದ್ದಾರೆ.