

ದೇವರಹಿಪ್ಪರಗಿ: ಐತಿಹಾಸಿಕ ಹಿನ್ನೆಲೆಯ ರಾವುತರಾಯ-ಮಲ್ಲಯ್ಯರ ಜಾತ್ರಾ ಮಹೋತ್ಸವ ಪಟ್ಟಣದಲ್ಲಿ ಸೋಮವಾರ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭಕ್ತಿ ಭಾವದೊಂದಿಗೆ ಆರಂಭವಾಯಿತು.
ರಾವುತರಾಯ ಅಶ್ವಾರೂಢನಾಗಿ ತೆರೆದ ಬಂಡಿಯಲ್ಲಿ ನಸುಕಿನ 5 ಗಂಟೆಗೆ ಮೂಲ ದೇವಸ್ಥಾನದಿಂದ ಹೊರಟು ಬೆಳಗಿನ 8 ಗಂಟೆಗೆ ಮಾನೆದೊಡ್ಡಿ ಎಂದೇ ಕರೆಯಲಾಗುವ ಸ್ಥಳದಲ್ಲಿ ನೂರಾರು ಭಕ್ತರು ಕಾಲ್ನಡಿಯಿಂದ ಹೊತ್ತು ತಂದ ವಿವಿಧ ಬಗೆಯ ಹೂವು, ಹಾರಗಳಿಂದ ಪುಷ್ಪಾಲಂಕಾರಗೊಂಡನು. ಇದನ್ನು ಹೂ ಮುಡಿಯುವುದು ಎಂದೇ ಕರೆಯಲಾಗುತ್ತದೆ. ನಂತರ ಶೀಡಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರು ಮುಂಬರುವ ಭವಿಷ್ಯದ ಕುರಿತಾಗಿ ಹೇಳಿಕೆ ನುಡಿದರು.
ನಂತರ ರಾವುತರಾಯನ ಬಂಡಿ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬನ್ನಿ ಮಹಾಕಾಳಿ ವೃಕ್ಷಕ್ಕೆ ತೆರಳಿ ಬನ್ನಿ ಮುಡಿದು ಮಲ್ಲಯ್ಯನ ದೇವಸ್ಥಾನ ತಲುಪಿತು. ನಂತರ ರಾವುತರಾಯ-ಗಂಗಿಮಾಳಮ್ಮರ ಸಾಂಪ್ರದಾಯಿಕ ಮದುವೆಯ ರೂಪಕ ಜರುಗಿತು.
ಸತತ ಐದು ದಿನ ಜರುಗುವ ಜಾತ್ರಾ ಮಹೋತ್ಸವದ ಮೊದಲ ದಿನ ರಾವುತರಾಯನು ಮಲ್ಲಯ್ಯನ ದೇವಸ್ಥಾನದಲ್ಲಿ ಆಸೀನನಾಗುವುದರೊಡನೆ ಜಾತ್ರೆಗೆ ಚಾಲನೆ ದೊರಕಿತು. ಜಾತ್ರೆಯ ಮೊದಲ ದಿನ ಆಗಮಿಸಿದ ಅಸಂಖ್ಯಾತ ಭಕ್ತರಿಗೆ ವಿವಿಧ ಭಕ್ತರಿಂದ ಅನ್ನ ಸಂತರ್ಪಣೆ ಜರುಗಿತು.