ರಾವುಲು ಭೀಮಾಶಂಕರಲಿಂಗ ಶ್ರೀಗಳ ಪುರ ಪ್ರವೇಶ

addapallakki
ಅರಸೀಕೆರೆಯಲ್ಲಿ ರಾವುಲು ಭೀಮಾಶಂಕರಲಿಂಗ ಶ್ರೀಗಳ ಪುರ ಪ್ರವೇಶ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
Published on

ಅರಸೀಕೆರೆ: ಪಂಚಪೀಠ ಧಾರ್ಮಿಕ ಉತ್ಸವ ಸಮಿತಿ ಹಾಗೂ ವೀರಶೈವ-ಲಿಂಗಾಯತ ಸಮುದಾಯದಿಂದ ಆಯೋಜಿಸಿದ್ದ ಶ್ರೀ ಹಿಮವದ್ ಕೇದಾರನಾಥ ರಾವುಲು ಭೀಮಾಶಂಕರಲಿಂಗ ಶ್ರೀಗಳ ಪುರ ಪ್ರವೇಶ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಕಂತೇನಹಳ್ಳಿ ಬಳಿ ಶ್ರೀಗಳು ಆಗಮಿಸಿದ ವೇಳೆ ಭಕ್ತರು ಪುಷ್ಪ ಮಳೆಗರೆದು ಬೈಕ್ ರ‌್ಯಾಲಿ ಮೂಲಕ ಭಕ್ತಿ ಪೂರ್ವಕವಾಗಿ ಬರಮಾಡಿಕೊಂಡರು. ಸಂಜೆ ನಾಲ್ಕು ಗಂಟೆಗೆ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಚಾಲನೆ ದೊರೆಯಿತು. ಸರ್ವಾಲಂಕೃತ ಪಲ್ಲಕ್ಕಿ ಮೇಲೆ ವಿರಾಜಮಾನರಾಗಿದ್ದ ಗುರು ಶ್ರೇಷ್ಠ ಭೀಮಾಶಂಕರಲಿಂಗ ಶ್ರೀಗಳನ್ನು ಭಕ್ತರು ಹೆಗಲ ಮೇಲೆ ಹೊತ್ತು ಜಯಘೋಷ ಮೊಳಗಿಸುತ್ತ ಹೆಜ್ಜೆ ಹಾಕಿದರು.

ನೂರಾರು ಮಹಿಳೆಯರು ಪೂರ್ಣ ಕುಂಭದೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಸಾಗಿದರು. ದಶಕಗಳ ಬಳಿಕ ನಡೆದ ಐತಿಹಾಸಿಕ ಮಹೋತ್ಸವ ಕಣ್ತುಂಬಿಕೊಳ್ಳಲು ಜನರು ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. ಪೀಠಾಭಿಮಾನಿಗಳು ಶ್ರೀಗಳಿಗೆ ಹಾರ, ಫಲತಾಂಬೂಲ ಹಾಗೂ ಕಾಣಿಕೆ ನೀಡಿ ಆಶಿರ್ವಾದ ಪಡೆದರು.

ನಂದಿ ಧ್ವಜ, ವೀರಭದ್ರನ ಕುಣಿತ, ವೀರಗಾಸೆ ಹಾಗೂ ಕೇರಳದ ಚಂಡೆವಾದ್ಯ ಅಡ್ಡ ಪಲ್ಲಕ್ಕಿ ಮಹೋತ್ಸವಕ್ಕೆ ಕಳೆತಂದಿತು. ದೇವರ ಬಸವನಿಗೆ ಅಲಂಕಾರ ಮಾಡಲಾಗಿತ್ತು. ದಂಡು-ಕೆಲ್ಲಂಗೆರೆ, ಬಂಡೀಹಳ್ಳಿ, ತಳಲೂರು, ಯಾದಾಪುರ, ಸಂಕೋಡನಹಳ್ಳಿ, ಗುಂಡ್ಕಾನಹಳ್ಳಿ, ಕಂತೇನಹಳ್ಳಿ, ಗಂಡಸಿ,ಬಾಣಾವರ, ಜಾವಗಲ್, ಕಣಕಟ್ಟೆ ಜಾಜೂರು, ಬೆಂಡೇಕೆರೆ ಹಾಗೂ ನಗರ ಸೇರಿದಂತೆ ಸುತ್ತಮುತ್ತಲಿನ ಹಲವು ಹಳ್ಳಿಗಳ ಭಕ್ತರು ಅಡ್ಡ ಪಲ್ಲಕ್ಕಿ ಮಹೋತ್ಸವಕ್ಕೆ ಸಾಕ್ಷಿಯಾದರು.

ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ಶಿವಯೋಗೀಶ್ವರ ಶ್ರೀಗಳು ನೇತೃತ್ವ ವಹಿಸಿದ್ದರು. ವಿವಿಧ ಮಠಗಳ ಹರಗುರು ಚರಮೂರ್ತಿಗಳು ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಸಾಗಿದರು. ಪಂಚಪೀಠ ಧಾರ್ಮಿಕ ಉತ್ಸವ ಸಮಿತಿ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು, ಚುನಾಯಿತ ಜನಪ್ರತಿನಿಧಿಗಳು, ಕೇದಾರನಾಥ ಪೀಠದ ಭಕ್ತರು, ನಾಗರಿಕರು, ವಿವಿಧ ಸಮುದಾಯಗಳ ಮುಖಂಡರು, ಮಹಿಳೆಯರು ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಪ್ರವಾಸಿ ಮಂದಿರದ ಆವರಣದಿಂದ ಹೊರಟ ಭವ್ಯ ಮಹೋತ್ಸವ ಶಿವಾನಂದ ಕಾಲನಿಯಲ್ಲಿ ರುವ ವೀರಶೈವ ಸಮುದಾಯ ಭವನದ ಬಳಿ ಸಂಪನ್ನಗೊಂಡಿತು. ಫೆ.11ರಂದು ಬೆಳಗ್ಗೆ ಏಳು ಗಂಟೆಗೆ ಇಷ್ಟಲಿಂಗ ಪೂಜೆ ನೆರವೇರಲಿದ್ದು, ಬಳಿಕ ಧರ್ಮ ಜಾಗೃತಿ ಸಮಾವೇಶ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net