

ಮಂಗಳೂರು : ಪಿಲಿಕುಳ ಕಂಬಳ ಆಯೋಜನೆಯಲ್ಲಿ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ದ.ಕ.ಜಿಲ್ಲಾಡಳಿತ ಕಡೆಗಣಿಸಿರುವುದು ಖಂಡನೀಯ. ಇದನ್ನು ಬಿಲ್ಲವ ಸಮಾಜಕ್ಕೆ ಮಾಡಿದ ಅನ್ಯಾಯ ಎಂದು ಪರಿಗಣಿಸುವುದಾಗಿ ಮುಡಾ ಮಾಜಿ
ಅಧ್ಯಕ್ಷ ರವಿಶಂಕರ ಮಿಜಾರು ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಜಿಲ್ಲೆಯಲ್ಲಿ ಪ್ರಬಲವಾಗಿರುವ ಬಿಲ್ಲವ ಸಮಾಜ ಎಚ್ಚೆತ್ತುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಮಾಹಿತಿ ಇರಬೇಕಿತ್ತು. ಇದರ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗಬೇಕು ಎಂದರು.
ಕಂಬಳ ಆಯೋಜನೆಗೆ ಸಂಬಂಧಿಸಿ ದ.ಕ. ಜಿಲ್ಲಾಧಿಕಾರಿ ಅವರು ಶಾಸಕ ಕೋಟ್ಯಾನ್ ಅವರಿಗೆ ಅಗೌರವ ತೋರಿದ್ದಾರೆ. ಶಾಸಕರಿಗೆ ಆದ ಅವಮಾನಕ್ಕೆ ರಾಜ್ಯ ಸರ್ಕಾರ ಕಾರಣ. ಆಗಿರುವ ತಪ್ಪನ್ನು ಸರಿಪಡಿಸಿ ಜಿಲ್ಲಾಡಳಿತ ಪ್ರೊಟೋಕಾಲ್‌ನಂತೆ ಕಾರ್ಯನಿರ್ವಹಿಸಬೇಕು. ಇಲ್ಲವಾದಲ್ಲಿ ಬಿಲ್ಲವ ಸಮಾಜ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಉಮಾನಾಥ ಕೋಟ್ಯಾನ್ ಅವರು ಜಿಲ್ಲೆಯ ಬಿಲ್ಲವ ಸಮಾಜದ ಏಕೈಕ ಶಾಸಕ. ಸರ್ವ ಸಮಾಜದವರೊಂದಿಗೆ ಬೆರೆತು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಶಾಸಕರಿಗೆ ತನ್ನದೇ ಆದ ಪ್ರೊಟೋಕಾಲ್ ಇರುತ್ತದೆ. ಆದರೆ, ಪಿಲಿಕುಳ ಕಂಬಳ ವಿಚಾರದಲ್ಲಿ ನಿಯಮವನ್ನು ಮೀರಿ ಶಾಸಕರನ್ನು ಕಡೆಗಣಿಸಿ ಸಭೆ ನಡೆಸಲಾಗಿದೆ. ಕಂಬಳದ ಕರೆ ಪೂಜೆಗೂ ಶಾಸಕರನ್ನು ಕರೆಯಲಿಲ್ಲ. ಇದನ್ನು ಸರಿಪಡಿಸುವ ಜವಾಬ್ದಾರಿ ಸ್ಪೀಕರ್ ಯು.ಟಿ. ಖಾದರ್ ಅವರಿಗಿದೆ. ಶಾಸಕ ಉಮಾನಾಥ ಕೋಟ್ಯಾನ್ ಅವರು ಈಗಾಗಲೇ ಹಕ್ಕುಚ್ಯುತಿ ನೋಟಿಸ್ ಸ್ಪೀಕರ್‌ಗೆ ನೀಡಿದ್ದು, ಉತ್ತರ ನಿರೀಕ್ಷೆಯಲ್ಲಿದ್ದಾರೆ ಎಂದು ರವಿಶಂಕರ ಮಿಜಾರು ಹೇಳಿದರು.
ಕಾರ್ಪೋರೇಟರ್ ಸಂದೀಪ್ ಗರೋಡಿ, ಬಿಲ್ಲವ ಮುಖಂಡರಾದ ರಮೇಶ್ ಪೂಜಾರಿ, ಯಶವಂತ ದೇರಾಜೆ, ರಾಮ ಅಮೀನ್ ಪಚ್ಚನಾಡಿ, ಸತೀಶ್ ಕರ್ಕೇರ, ಬಿಲ್ಲವ ಬ್ರಿಗೇಡ್ ಸ್ಥಾಪಕಾಧ್ಯಕ್ಷ ಅವಿನಾಶ್ ಸುವರ್ಣ, ಜಯಕುಮಾರ್, ಹರಿಯಪ್ಪ ಸಾಲ್ಯಾನ್, ಮೋಹನ್ ರಾಜ್ ಉಪಸ್ಥಿತರಿದ್ದರು.