ದೇಶದ್ರೋಹಿ ಶಕ್ತಿಗಳ ಬೆಂಬಲ ಪಡೆದು ಕಾಂಗ್ರೆಸ್ ಸ್ಪರ್ಧೆ - ರವಿಶಂಕರ ಮಿಜಾರ್ ಟೀಕೆ

bbbbbbbbbbbbbbb
Published on



ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭೂತಪೂರ್ವ ಬಹುಮತದಿಂದ ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವ ಐತಿಹಾಸಿಕ ಮಹತ್ವದ ಚುನಾವಣೆ ಇದಾಗಿದೆ. 2047ರ ವೇಳೆಗೆ ಭಾರತವನ್ನು ವಿಶ್ವದ ನಂ.1 ರಾಷ್ಟ್ರವಾಗಿ ರೂಪಿಸುವ ಅಮೃತ ಕಾಲದಲ್ಲಿ ಇಂದು ನಾವಿದ್ದೇವೆ. ಈ ಚುನಾವಣೆಯನ್ನು ಅತ್ಯಂತ ಮಹತ್ವದ್ದಾಗಿ ಪರಿಗಣಿಸಿ ದೇಶ ಕಟ್ಟುವ ನಿಟ್ಟಿನಲ್ಲಿ ಮತದಾನ ಮಾಡುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದು ಮಾಜಿ ಮುಡಾ ಅಧ್ಯಕ್ಷ ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ಚುನಾವಣಾ ಪ್ರಭಾರಿ ರವಿಶಂಕರ ಮಿಜಾರ್‌ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿದ್ದು ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ಮೋದಿ ಅವರ ಯೋಜನೆಗಳು
ಯಾವುದೇ ಒಂದು ವರ್ಗಕ್ಕೆ ಸೀಮಿತವಲ್ಲ. ಭಾರತದ 135 ಕೋಟಿ ಜನರಿಗೆ ತಲುಪುವ ಕೆಲಸವನ್ನು ಅವರು ಮಾಡಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌ದಂತೆ ಎಲ್ಲರಿಗೂ ತಲುಪುವಂತೆ ಕಳೆದ 10 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಮೋದಿ ಅವರು 2014ರಿಂದ 2019ರ ವರೆಗೆ ಜನ್‌ಧನ್ ಮತ್ತು ಇತರ ಹಲವಾರು ಕಾರ್ಯಕ್ರಮಗಳನ್ನು ನೀಡಿದರು. ಐದು ವರ್ಷದ ಅವಧಿಯ ಸಾಧನೆ ಆಧರಿಸಿ ಮತಯಾಚನೆ ಮಾಡಿದರು. ದೇಶದ ಜನರು ಅವರನ್ನು ಭರ್ಜರಿಯಾಗಿ ಗೆಲ್ಲಿಸಿ ಮತ್ತೊಮ್ಮೆ ಅಧಿಕಾರಕ್ಕೆ ತಂದರು. 2019ರಿಂದ 2024ರ ವರೆಗೆ ಮೋದಿಯವರು ದೇಶವನ್ನು ಅಭಿವೃದ್ಧಿಯ ಮತ್ತೊಂದು ಸ್ತರಕ್ಕೆ ಮೇಲೆತ್ತಿದ್ದಾರೆ. ಆರ್ಟಿಕಲ್ 370 ರದ್ದು, ತ್ರಿವಳಿ ತಲಾಖ್ ರದ್ದು, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಸೇರಿದಂತೆ ಹಲವು ಐತಿಹಾಸಿಕ ಕಾರ್ಯಗಳನ್ನು ಈ ಐದು ವರ್ಷದ ಅವಧಿಯಲ್ಲಿ ಮಾಡಿದ್ದಾರೆ. ಮಿಲಿಟರಿ ಯೋಜನೆ, ಹೆದ್ದಾರಿ, ರೈಲ್ವೆ ಸೇರಿದಂತೆ ಎಲ್ಲ ಕಡೆ 21ನೇ ಶತಮಾನದ ಯೋಜನೆಗಳನ್ನು ಹಾಕಿಕೊಂಡು ಭಾರತವನ್ನು ಇವತ್ತು ವಿಶ್ವದಲ್ಲೇ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಸಿದ್ದಾರೆ. ಈ ಕಾರ್ಯಕ್ರಮಗಳು ಅವರ 3ನೇ ಅವಧಿಯಲ್ಲೂ ಮುಂದುವರಿಯಲಿದೆ ಎಂದು ಮಿಜಾರ್ ತಿಳಿಸಿದರು.
ಪಿಎಂ ವಿಶ್ವಕರ್ಮ ಯೋಜನೆ ಮೂಲಕ ದೇಶದ ಹಿಂದುಳಿದ ಸಮಾಜದ ಎಲ್ಲ ವರ್ಗಗಗಳಿಗೆ ಆದ್ಯತೆ ಕೊಟ್ಟಿದ್ದಾರೆ. 50 ಕುಲಕಸುಬುಗಳ ಅವಲಂಬಿಗಳಿಗೆ ಈ ಯೋಜನೆಯ ಅನುಕೂಲ ದೊರೆತಿದೆ. ಕರಾವಳಿ ಭಾಗದ ಮೊಗವೀರ ಸಮುದಾಯಕ್ಕೆ ಮತ್ಸ್ಯ ಸಂಪದ ಯೋಜನೆಯ ಲಾಭ ದೊರೆತಿದೆ. ಮೀನುಗಾರಿಕಾ ಅಭಿವೃದ್ಧಿಗೆ 20,000 ಕೋಟಿ ರೂ.ಗಳ ಯೋಜನೆ ಹಾಕಿದ್ದಾರೆ. ಮೀನಿನ ರಫ್ತು ಯೋಜನೆ ಮೂಲಕ ಮೀನುಗಾರರಿಗೆ ಪುನಶ್ಚೇತನ ನೀಡುವ ಕಾರ್ಯ ಮಾಡಲಾಗಿದೆ ಎಂದು ರವಿಶಂಕರ ಮಿಜಾರ್ ವಿವರಿಸಿದರು.
2019ರ ಚುನಾವಣೆಯಲ್ಲಿ ಮೋದಿಯವರ ನೇತೃತ್ವದ ಬಿಜೆಪಿ ಒಬಿಸಿ ವರ್ಗಕ್ಕೆ ಸೇರಿದ 93 ಸಂಸದರನ್ನು ಲೋಕಸಭೆಗೆ ಗೆಲ್ಲಿಸಿದ್ದಾರೆ. ಸ್ವತಃ ಹಿಂದುಳಿದ ಸಮುದಾಯದಿಂದ ಬಂದವರು ಮೋದಿ. ಹಿಂದುಳಿದ ಸಮಾಜಕ್ಕೆ ಆತ್ಮಸ್ಥೈರ್ಯ ಕೊಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಈ ಚುನಾವಣೆಯಲ್ಲೂ ಹೆಚ್ಚಿನ ಸಂಖ್ಯೆಯ ಹಿಂದುಳಿದ ಸಮುದಾಯದವರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುವ ಯೋಜನೆ ಹಾಕಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನದಲ್ಲಿ ದೊಡ್ಡ ಪ್ರಮಾಣದ ಜಯ ಗಳಿಸಲು ಹಿಂದುಳಿದ ಸಮಾಜಕ್ಕೆ ಪ್ರಧಾನಿ ಮೋದಿಯವರು ಕೊಟ್ಟ ಕೊಡುಗೆಯೇ ಕಾರಣ. ಮುಖ್ಯಮಂತ್ರಿ ಸ್ಥಾನದಲ್ಲೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗಿದೆ ಎಂದು ಮಿಜಾರ್ ತಿಳಿಸಿದರು.
ಕಳೆದ ಬಾರಿ ಕಾಂಗ್ರೆಸ್‌ಗೆ ವಿರೋಧವಾಗಿ ನಿಂತಿದ್ದ ಎಸ್‌ಡಿಪಿಐ ಇವತ್ತು ಚುನಾವಣೆಗೆ ನಿಲ್ಲದೆ ಕಾಂಗ್ರೆಸ್‌ಗೆ ಬೆಂಬಲ ನೀಡಿದೆ. ಕಾಂಗ್ರೆಸ್ ಕೂಡ ದೇಶದ್ರೋಹಿ ಶಕ್ತಿಗಳ ಬೆಂಬಲ ಪಡೆದು ಚುನಾವಣೆಗೆ ಸ್ಪರ್ಧಿಸುತ್ತಿದೆ. ಕೇರಳದಲ್ಲಿ ಕಾಂಗ್ರೆಸ್- ಕಮ್ಯುನಿಸ್ಟ್ ವಿರೋಧ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್-ತೃಣಮೂಲ ವಿರೋಧ, ದಿಲ್ಲಿಯಲ್ಲಿ ಆಪ್ ಜತೆಗೆ ವಿರೋಧ- ಹಾಗಿದ್ದರೂ ದೇಶದಲ್ಲಿ ಬಿಜೆಪಿ ವಿರುದ್ಧ ನಾವೆಲ್ಲ ಒಟ್ಟಾಗಿದ್ದೇವೆ ಎನ್ನುವ ಸುಳ್ಳನ್ನು ಹೇಳುತ್ತಿದ್ದಾರೆ. ಮೋದಿಯವರು ಅಧಿಕಾರಕ್ಕೆ ಬರಬಾರದು, ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದು ಮಾತ್ರ ಅವರ ಗುರಿ. ಆದರೆ ಮತದಾರರು ಬಹಳ ಬುದ್ಧಿವಂತರು. ಕರಾವಳಿಯ ಎಲ್ಲ ಮತದಾರರು ಜಾಗೃತರಾಗಿ ಮೋದಿಯವರ ಕಲ್ಪನೆಗಳಿಗೆ, ಅವರ ಸರಕಾರದ ರೀತಿನೀತಿಗಳಿಗೆ ಬೆಲೆ ಕೊಟ್ಟು ಅವರನ್ನು ಅಭೂತಪೂರ್ವ ಬೆಂಬಲದೊಂದಿಗೆ ಮತ್ತೆ ಅಧಿಕಾರಕ್ಕೆ ತರಲಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕ್ಯಾ.ಬ್ರಿಜೇಶ್ ಚೌಟ ಹಾಗೂ ಉಡುಪಿ-ಚಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಜನರು ಆಶೀರ್ವಾದ ಮಾಡುವುದು ನಿಶ್ಚಿತ ಎಂದು ಅವರು ಹೇಳಿದರು.
ಬಿಜೆಪಿ ಮಾಧ್ಯಮ ಪ್ರಮುಖ ಎಸ್.ಆರ್.ಹರೀಶ್ ಆಚಾರ್ಯ, ಪಕ್ಷದ ಹಿರಿಯರಾದ ನಾರಾಯಣ ಗಟ್ಟಿ, ಸೀತಾರಾಮ ಬಂಗೇರ, ಬಾಬು ಬಂಗೇರ ಉಳ್ಳಾಲ, ರುಕ್ಮಯ ನಾಯಕ್, ಸಂಜೀವ ಅಡ್ಯಾರ್, ಮಾಧ್ಯಮ ಸಹ ಸಂಚಾಲಕ ಮನೋಹರ ಶೆಟ್ಟಿ ಕದ್ರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net