

ಕಾರವಾರ: ಆಗಸ್ಟ್ 21 ರಂದು ನಡೆಯಲಿರುವ ಕಾರವಾರ ನಗರಸಭೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ.
ಮೊದಲ ಅವಧಿಯಂತೆ ಎರಡನೇ ಅವಧಿಗೂ ಬಿಜೆಪಿ ಜೆಡಿಎಸ್ ಮೈತ್ರಿ ಸಾಧ್ಯತೆ ಇದ್ದು, ರವಿರಾಜ ಅಂಕೋಲೆಕರ್ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಚುನಾಯಿಸಲಾಗಿದೆ ಎಂದು ಬಿಜೆಪಿ ಮಾಧ್ಯಮ ವಿಭಾಗ ಪ್ರಕಟಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಬಿಜೆಪಿ ಎರಡನೇ ಅವಧಿಗೂ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಪಕ್ಷದ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಎಂಎಲ್ ಸಿ ಗಣಪತಿ ಉಳ್ವೇಕರ್, ಪಕ್ಷದ ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ನಗರಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 11 ಸ್ಥಾನಗಳನ್ನು ಹೊಂದಿವೆ. ಜೆಡಿಎಸ್ ನ ನಾಲ್ವರು ಹಾಗೂ ಐವರು ಪಕ್ಷೇತರರಿದ್ದಾರೆ. ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ಜೆಡಿಎಸ್ ಹಾಗೂ ಪಕ್ಷೇತರರ ಬೆಂಬಲ ಪಡೆದು, ಬಿಜೆಪಿಯ ಡಾ.ನಿತಿನ್ ಪಿಕಳೆ ಅಧ್ಯಕ್ಷರಾಗಿದ್ದರು. ಪಕ್ಷೇತರ ಸದಸ್ಯ ಪಿ.ಪಿ.ನಾಯ್ಕ ಉಪಾಧ್ಯಕ್ಷರಾಗಿದ್ದರು. ಜೆಡಿಎಸ್ ನ ಸಂಧ್ಯಾ ಬಾಡಕರ್ ಹಾಗೂ ಮನೋಜ ಬಾಂದೇಕರ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಬಿಜೆಪಿಯ ಸಮಾನ ಸ್ಥಾನ ಪಡೆದಿದ್ದರೂ ವಿರೋಧ ಪಕ್ಷದಲ್ಲಿ ಕುಳಿತಿತ್ತು. ಈ ಬಾರಿ ಜೆಡಿಎಸ್ ಉಪಾಧ್ಯಕ್ಷ ಸ್ಥಾನ ಕೇಳುತ್ತಿದ್ದು ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.