

ಮಡಿಕೇರಿ: ವಿದ್ಯಾರ್ಥಿಗಳು ವಿಜ್ಞಾನಿಗಳ ಅನ್ವೇಷಣೆ ಹಾಗೂ ಅವರ ಸಾಧನೆಗಳ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಂಡು ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಕರೆ ನೀಡಿದರು.
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು(ಕ.ರಾ.ವಿ.ಪ.) ವತಿಯಿಂದ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ.ರಾ.ವಿ.ಪ. ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸರ್ ಸಿ.ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಗುತ್ತಿರುವ ಬೆಳವಣಿಗೆಗಳು ಹಾಗೂ ಆವಿಷ್ಕಾರಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು. ಜಿಲ್ಲೆಯಲ್ಲಿ ವಿಜ್ಞಾನ ಪರಿಷತ್ತಿನ ಚಟುವಟಿಕೆಗಳನ್ನು ಉತ್ತಮವಾಗಿ ಸಂಘಟಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಆಸಕ್ತಿ ಬೆಳೆಸುತ್ತಿರುವುದು ಶ್ಲಾಘನೀಯವಾದುದು. ಜಿಲ್ಲೆಯ ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಘಟಕಗಳನ್ನು ಸ್ಥಾಪಿಸುವ ಮೂಲಕ ವಿವಿಧ ರಚನಾತ್ಮಕ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದು ರವೀಂದ್ರ ರೈ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಹಾಗೂ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಲು ಇಂತಹ ಸ್ಪರ್ಧೆಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡು ವಿಜ್ಞಾನದ ಕಡೆ ಆಸಕ್ತಿ ಬೆಳೆಸಿಕೊಳ್ಳಬೇಕು. ಜಿಲ್ಲೆಯಲ್ಲಿ ವಿಜ್ಞಾನ ಪರಿಷತ್ತಿನ ವತಿಯಿಂದ ವಿವಿಧ ವೈಜ್ಞಾನಿಕ ಕಾರ್ಯಕ್ರಮಗಳನ್ನು ಉತ್ತಮವಾಗಿ ಸಂಘಟಿಸುತ್ತಿರುವುದು ಮಕ್ಕಳ ಕಲಿಕೆಗೆ ತುಂಬಾ ಸಹಕಾರಿಯಾಗಿದೆ ಎಂದು ಬೇಬಿಮ್ಯಾಥ್ಯೂ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಮತ್ತು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ವಿಜ್ಞಾನ ಪರಿಷತ್ತಿನ ವತಿಯಿಂದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕೌಶಲ್ಯ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಮೂಲ ಉದ್ದೇಶದಿಂದ ವಿವಿಧ ಸ್ಪರ್ಧಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆ ಸೇರಿದಂತೆ ಜಿಲ್ಲೆ, ರಾಜ್ಯ ಮಟ್ಟದ ಇನ್ನಿತರ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸ್ಪರ್ಧಾ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಕೆ.ಜಿ.ನೀಲಕಂಠಪ್ಪ ಮಾತನಾಡಿ, ಶಾಲೆಗಳಲ್ಲಿ ವಿಜ್ಞಾನ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸುವ ಮೂಲಕ ವಿದ್ಯಾರ್ಥಿಗಳನ್ನು ವಿಜ್ಞಾನದ ಕಡೆಗೆ ಆಕರ್ಷಿತರನ್ನಾಗಿ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಜಿ.ಶ್ರೀಹ, ಸಮಿತಿಯ ಮಾಜಿ ಉಪಾಧ್ಯಕ್ಷೆ ಡಿ.ಎಂ.ರೇವತಿ, ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್, ಬಿ.ಆರ್.ಸಿ ಪಿ.ಕೆ.ನಳಿನಿ, ಕ್ವಿಜ್ ಮಾಸ್ಟರ್ ಸಿ.ಎಸ್.ಸುರೇಶ್, ವಿಜ್ಞಾನ ಶಿಕ್ಷಕರಾದ ಹ್ಯೂಬರ್ಟ್ ಡಯಾಸ್, ಬಿ.ಬಿ.ದಿನೇಶ್, ಜೆನೆಟ್, ಎನ್.ಎಸ್.ಚಂದ್ರಕಲಾ ಇದ್ದರು.