

ಮಂಡ್ಯ: ಲೋಕಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಇರುವ ವೇಳೆಯೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಅದರಂತೆ ಡಾ.ಎಚ್.ಎನ್.ರವೀಂದ್ರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಘೋಷಿಸುವುದರ ಜತೆಗೆ ಪಕ್ಷದ ನಾಯಕರ ವಿರುದ್ಧ ತೀವ್ರ ಅಸಮಾಧಾನದ ಮಾತುಗಳನ್ನಾಡಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕರಿಗೆ ಕಾರ್ಯಕರ್ತರು ಗುಲಾಮರ ಸಮಾನ. ಒಂದಷ್ಟು ಹಣ ಕೊಟ್ಟು ಕೆಲಸ ಮಾಡಿಕೊಳ್ಳಬಹುದೆಂಬ ಮನೋಭಾವವಿದೆ. ರಾಜ್ಯದ ಜನರಿಗೆ ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತವಾಗಿ ಕೊಡುವ ಸಂಬಂಧ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರು ಕೇವಲ 20 ನಿಮಿಷ ಸಮಯ ಕೊಡಲಿಲ್ಲ. ಅವರನ್ನು ಭೇಟಿ ಮಾಡಲು ದೆಹಲಿಗೆ ಹೋದರೂ ಪ್ರಯೋಜನವಾಗಿಲ್ಲ. ಸಿದ್ದರಾಮಯ್ಯ ಅವರು ಎಲ್ಲವನ್ನೂ ಉಚಿತವಾಗಿ ಕೊಡುವ ತಪ್ಪು ಮಾಡಬಾರದಿತ್ತು ಎಂದರು.
ಕಳೆದ ವಿಧಾನಸಭಾ ಚುನಾವಣೆ ಬಳಿಕ ಪಕ್ಷದ ನಾಯಕರು ತಮ್ಮನ್ನು ನಡೆಸಿಕೊಂಡ ರೀತಿಗೆ ಬೇಸರವಿದೆ. ಸರ್ಕಾರ ರಚನೆಯಾದ ಬಳಿಕ ಸ್ಥಳೀಯ ಸಂಸ್ಥೆಯ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ 22 ಜನರ ಪಟ್ಟಿ ಕೊಟ್ಟಿದ್ದೇನೆ. ಕನಿಷ್ಟ ಒಬ್ಬರಿಗಾದರೂ ಅವಕಾಶ ಕೊಡಬೇಕಲ್ಲವೇ?. ಇಂತಹ ಬೇಸರ ಪಕ್ಷದ ಹಲವರಲ್ಲಿದೆ. ಅವರೆಲ್ಲರ ಪ್ರತಿನಿಧಿಯಾಗಿ ನಾನು ಮಾತನಾಡುತ್ತಿದ್ದೇನೆ. ಈ ಎಲ್ಲ ಕಾರಣಕ್ಕೆ ಮಾ.5ರಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ ಕೆಪಿಸಿಸಿ ಅಧ್ಯಕ್ಷರು ಅಂಗೀಕರಿಸದಿರುವ ಕಾರಣ ಬಹಿರಂಗವಾಗಿಯೇ ಹೇಳುವಂತಹ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಯಾರು ಅಭ್ಯರ್ಥಿಯಾಗಬೇಕೆನ್ನುವುದರ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸದೇ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿರುವುದು ವಿರೋಧಿಸುತ್ತೇನೆ. ಚುನಾವಣೆಯಲ್ಲಿ ಹಣ ಇರುವವರನ್ನೇ ಅಭ್ಯರ್ಥಿ ಮಾಡಿದರೆ ಪಕ್ಷಕ್ಕೆ ದುಡಿದವರ ಕಥೆ ಏನು?. ಈ ಹಿನ್ನೆಲೆಯಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಪಕ್ಷದಲ್ಲಿ ಸದಸ್ಯನಾಗಷ್ಟೇ ಇರುತ್ತೇನೆ. ಆದರೆ ಈ ಚುನಾವಣೆಯಲ್ಲಿ ಈಗಾಗಲೇ ಸ್ಪರ್ಧಾಕಾಂಕ್ಷಿ ಎನ್ನುವಂತೆ ಬಿಂಬಿಸುತ್ತಿರುವ ಸ್ಟಾರ್ ಚಂದ್ರು ಅಥವಾ ಹೊರಗಿನ ಯಾರೇ ಅಭ್ಯರ್ಥಿಯಾದರೂ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.