

ಮಂಗಳೂರು : ದೃಷ್ಟಿ ಮೀಡಿಯಾ ಪ್ರೊಡಕ್ಷನ್ ನಿರ್ಮಾಣದ, ಸಂತೋಷ್ ಕೊಡಂಕೇರಿ ನಿರ್ದೇಶನದ ‘ರವಿಕೆ ಪ್ರಸಂಗ ‘ಕನ್ನಡ ಚಲನಚಿತ್ರ ಫೆ. 16ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಮಧ್ಯಮ ವರ್ಗದ ಕುಟುಂಬವೊಂದರ ಹೆಣ್ಣು ಮಗಳ ಸುತ್ತ ಹೆಣೆಯಲಾಗಿರುವ ಕಥೆ ಇದಾಗಿದ್ದು, ರವಿಕೆ ಪ್ರಸಂಗವೊಂದು ಕೋರ್ಟ್ ಮೆಟ್ಟಿಲೇರಿದಾಗ ಸಮಾಜ ಹೆಣ್ಣನ್ನು ನೋಡುವ ಪರಿ ಈ ಚಿತ್ರದ ಎಳೆಯಾಗಿದೆ ಎಂದು ನಿರ್ದೇಶಕ ಸಂತೋಷ್ ಕೊಡಂಕೇರಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿನಿಮಾ ಕಥೆಯ ಮೂಲಕ ಕೇವಲ ಮನರಂಜನೆ ಹಾಗೂ ಸಂದೇಶ ನೀಡಿದರೆ ಸಾಲದು. ನೋಡಿದವರಿಗೆ ಚಿತ್ರ ತಮ್ಮ ಬದುಕಿನ ಭಾಗ ಎನ್ನುವ ಭಾವನೆ ಮೂಡಬೇಕು . ಇಂತಹ ಹಂಬಲದಿಂದ ರವಿಕೆ ಪ್ರಸಂಗ ಸಿನಿಮಾ ಮಾಡಲಾಗಿದೆ. ಜನರು ಖಂಡಿತ ಸಿನಿಮಾ ಮೆಚ್ಚುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಚಿತ್ರದಲ್ಲಿ ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಹನುನಂತೇ ಗೌಡ, ಖುಷಿ ಆಚಾರ್, ಹನುಮಂತ ರಾವ್ ಕೆ. ಮುಂತಾದವರು ನಟಿಸಿದ್ದಾರೆ. ಮುರಳೀಧರ್ ಎನ್. ಅವರ ಛಾಯಾಗ್ರಹಣ, ರಘು ಶಿವರಾಮ್ ಅವರ ಸಂಕಲನ, ವಿನಯ್ ಶರ್ಮಾ ಅವರ ಸಂಗೀತ, ರಮೇಶ್‌ಕೃಷ್ಣ ಅವರ ಹಿನ್ನೆಲೆ ಹಾಗೂ ಕಿರಣ್ ಕಾವೇರಪ್ಪ ಸಾಹಿತ್ಯ ಒದಗಿಸಿದ್ದಾರೆ. ಸುಳ್ಯ ತಾಲೂಕಿನ ಸಂಪಾಜೆ ಆಸುಪಾಸಿನಲ್ಲಿ ಚಿತ್ರೀಕರಣ ನಡೆದಿದೆ ಎಂದು ಅವರು ತಿಳಿಸಿದರು.
ಚಿತ್ರದ ನಟಿ ಗೀತಾ ಭಾರತಿ ಭಟ್ , ಕಥೆ ಮತ್ತು ಸಂಭಾಷಣೆ ಬರೆದಿರುವ ಪಾವನಾ ಸಂತೋಷ್, ನಟ ರಘು ಪಾಂಡೇಶ್ವರ್, ರಕ್ಷಕ್ ಉಪಸ್ಥಿತರಿದ್ದರು.