

ಹುಬ್ಬಳ್ಳಿ : ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಹುಬ್ಬಳ್ಳಿ ಶಾಖೆಯ 29ನೇ ವಾರ್ಷಿಕೋತ್ಸವದ ಅಂಗವಾಗಿ ಫೆ. 2ರಂದು ಸಂಜೆ 4.30ಕ್ಕೆ ‘ರವಿದಾತಾರ ಪ್ರತಿಭಾ ಪುರಸ್ಕಾರ’ ಸಮಾರಂಭವನ್ನು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ, ಶಿರಸಿಯ ವಿದುಷಿ ಭಾರ್ಗವಿ ಬಿ.ಎಚ್. ಹಾಗೂ ಹುಬ್ಬಳ್ಳಿಯ ವಿದುಷಿ ಚೈತ್ರಾ ವಸ್ತ್ರದ ಅವರಿಗೆ ರವಿದಾತಾರ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದರು.
ಇದಕ್ಕೂ ಮೊದಲು 2.30ಕ್ಕೆ ಚಿತ್ರ ಚೌತಿ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಿರಿಯ, ಕಿರಿಯ ಭರತನಾಟ್ಯ ಕಲಾವಿದರಿಂದ ನೃತ್ಯ ಬಂಧಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಭಗವತ್ಪಾದಂ ಆಧ್ಯಾತ್ಮಿಕ ಸಂಸ್ಥೆಯ ಗುರುಭಕ್ತತತ್ವರ ಅವಧೂತ ಶ್ರೀ ರಮೇಶ ಮಹಾರಾಜ, ಕೆಎಲ್ಇ ಐಟಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕಿ ಮಧುಮತಿ ಧಡೂತಿ ಹಾಗೂ ಡಾ. ಶೃತಿ ಹೆಗಡೆ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸತೀಶ ಮೂರುರ ಅವರು ರಚಿಸಿದ ‘ಭರತವರ್ಷ’ ನೃತ್ಯ ರೂಪಕ ಹಾಗೂ ಡಾ. ಸಹನಾ ಭಟ್ಟ ಅವರಿಂದ ‘ನವರಸ ಪಾಂಚಾಲಿ’ ಏಕವ್ಯಕ್ತಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.
ವಿದುಷಿ ಸುಷ್ಮಾ ಕೊಂಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.