

ಹುಬ್ಬಳ್ಳಿ: ಛತ್ತೀಸಗಢದಲ್ಲಿ ಆಲ್ ಇಂಡಿಯಾ ರಾಮಾನುಜನ್ ಮ್ಯಾಥ್ಸ್ ಕ್ಲಬ್ (ದೆಹಲಿ) ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ 17 ನೇ ರಾಷ್ಟ್ರೀಯ ಗಣಿತ ಸಮಾವೆಶದಲ್ಲಿ ಧಾರವಾಡದ ಹಿರೇಮಲ್ಲೂರ ಈಶ್ವರನ್ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಗಣಿತ ಉಪನ್ಯಾಸಕ ರವಿಪ್ರಸಾದ ಕುಲಕರ್ಣಿಗೆ ರಾಷ್ಟ್ರೀಯ ಅತ್ಯುತ್ತಮ ಗಣಿತ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ವಿಜ್ಞಾನಿ ಡಾ. ಜೆ. ಜೆ. ರಾವಲ್, ಇಸ್ರೋದ ಮಾಜಿ ವಿಜ್ಞಾನಿ ಡಾ. ದೀಲಿಪ್ ಭಟ್, ಕರ್ನಾಟಕದ ಗಣಿತಜ್ಞ ಎಂ.ಎನ್. ಕಡಪಟ್ಟಿ, ಕ್ಲಬ್ ಅಧ್ಯಕ್ಷ ಡಾ. ಚಂದ್ರಮೌಳಿ ಜೋಶಿ ಉಪಸ್ಥಿತಿಯಲ್ಲಿ ಪ್ರಶಸ್ತಿ ವಿತರಿಸಲಾಯಿತು.
ಶಿಕ್ಷಕ ರವಿ ಕುಲಕರ್ಣಿ ಗಣಿತ ವಿಷಯವನ್ನು ಸರಳಗೊಳಿಸಲು ಪ್ರಾಥಮಿಕ ಹಂತದಿಂದ ಕಾಲೇಜು ಹಂತದವರೆಗೆ ಅನೇಕ ವಿನೂತನ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದು ವಿವಿಧ ಶಾಲಾ ಕಾಲೇಜುಗಳಲ್ಲಿ ಗಣಿತ ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದಾರೆ.