ರವಿ ಕೂಡ್ಲಿಗಿ ಕೊಡುಗೆ ಅಪಾರ

18 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಸಾಹಿತ್ಯ, ಸಂಗೀತದ ತವರೂರು. ಸಂಗೀತ ಮನೆತನದಿಂದಲೇ ಬಂದ ರವಿ ಕೂಡ್ಲಿಗಿ ಬಾಲ್ಯದಿಂದಲೇ ತಬಲಾದಲ್ಲಿ ಪರಿಣಿತ ಹೊಂದಿದ್ದರು ಎಂದು ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಹೇಳಿದರು.
ನಗರದ ಚಿಲಿಪಿಲಿ ಸಂಗೀತ ಸಾಂಸ್ಕೃತಿಕ ಕಲಾ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಪಂ. ರವಿ ಕೂಡ್ಲಿಗಿ ಪುಣ್ಯಸ್ಮರಣೆ ನಿಮಿತ್ತ ಭಾನುವಾರ ಆಯೋಜಿಸಿದ್ದ ತಬಲಾ ಮಾಂತ್ರಿಕ ಪಂ. ರವಿ ಕೂಡ್ಲಿಗಿ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಂ. ರವಿ ಕೂಡ್ಲಿಗಿ ಕಠಿಣ ಶ್ರಮದಿಂದ ಸಾಧನೆಗೈದು ತಬಲಾ ಮಾಂತ್ರಿಕ ಎಂಬ ಬಿರುದು ಪಡೆದು, ನಾಡಿನ ಅನೇಕ ಹಿರಿಯ ಸಂಗೀತಗಾರರಿಗೆ ತಬಲಾ ಸಾಥ್ ನೀಡಿದ್ದಾರೆ. ತಬಲಾದಲ್ಲಿ ಅನೇಕ ಶಿಷ್ಯರನ್ನು ಬೆಳೆಸುವ ಮೂಲಕ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೋಘವಾದುದು ಎಂದರು.
ಕರ್ನಾಟಕ ಕೇಂದ್ರೀಯ ವಿವಿ ಸಂಗೀತ ವಿಭಾಗದ ಮುಖ್ಯಸ್ಥೆ ಡಾ. ಜಯದೇವಿ ಜಂಗಮಶೆಟ್ಟಿ ಮಾತನಾಡಿ, ಗಾಯನ, ನೃತ್ಯ ಹಾಗೂ ವಾದನ ಇವುಗಳ ತ್ರಿವೇಣಿ ಸಂಗಮವೇ ಸಂಗೀತ ಎನ್ನಲಾಗಿದೆ. ಪಂ.ರವಿ ಸ್ವರವಾದ್ಯ ಹಾಗೂ ತಬಲಾ ವಾದ್ಯದಲ್ಲಿ ನಿಸ್ಸೀಮರಾಗಿದ್ದರು. ಸಂಗೀತಗಾರರಿಗೆ ತಬಲಾ ಸಹಕಾರ ಬಹಳ ಮುಖ್ಯವಾಗಿರುತ್ತದೆ ಎಂದರು.
ತಬಲಾವಾದಕ ಪಂ. ರಾಜೇಂದ್ರ ನಾಕೋಡ ಅವರಿಗೆ 2023ನೇ ಸಾಲಿನ ತಬಲಾ ಮಾಂತ್ರಿಕ ಪಂ. ರವಿ ಕೂಡ್ಲಿಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಜ್ಯೋತಿಲಕ್ಷ್ಮೀ ಕೂಡ್ಲಿಗಿ ಮಾತನಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು.
ರಾಘವೇಂದ್ರ ಆಯಿ, ಡಾ. ಶಶಿಧರ ನರೇಂದ್ರ, ಡಾ.ಮಲ್ಲಿಕಾರ್ಜುನ ತರ್ಲಗಟ್ಟಿ, ಪಂ.ವಾದಿರಾಜ ನಿಂಬರಗಿ, ಉಸ್ತಾದ್ ಶಫಿಕ್‌ಖಾನ್, ಡಾ.ಎಚ್.ಎ. ಕಟ್ಟಿ, ವೀರಣ್ಣ ಪತ್ತಾರ, ಪ್ರಕಾಶ ಬಾಳಿಕಾಯಿ, ಡಾ.ಶ್ರೀಧರ ಕುಲಕರ್ಣಿ, ಡಾ. ಬಸವರಾಜ ಕಲೆಗಾರ, ಡಾ.ಉದಯಕುಮಾರ ದೇಸಾಯಿ, ಉಸ್ತಾದ್ ನಿಸ್ಸಾರ ಅಹ್ಮದ, ಶ್ರೀಧರ ಮಾಂಡ್ರೆ, ಡಾ. ಮೃತ್ಯುಂಜಯ ಕುರುಬರ, ಭಾರತಿ ಸಾಬಳೆ, ಇತರರು ಇದ್ದರು.
ಡಾ.ಎ.ಎಲ್.ದೇಸಾಯಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಲಕ್ಷ್ಮೀ ಜಾಧವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net