

ಮಂಡ್ಯ: ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆ ಪ್ರಾರಂಭಕ್ಕೆ ಅನುಕೂಲವಾಗಲೆಂದು ರಾಜ್ಯ ಸರ್ಕಾರ 10 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ ಎಂದು ಉದ್ಯಮಿ, ಕಾಂಗ್ರೆಸ್ ಮುಖಂಡ ರವಿ ಭೋಜೇಗೌಡ ಹೇಳಿದರು.
ಸಚಿವ ಎನ್.ಚಲುವರಾಯಸ್ವಾಮಿ ಅವರ ಜನ್ಮದಿನದ ಅಂಗವಾಗಿ ಗುರುವಾರ ನಗರದ ಸ್ವರ್ಣಸಂದ್ರದ ಪ್ರೇರಣಾ ವಿಶೇಷ ಚೇತನ ಶಾಲಾ ಮಕ್ಕಳಿಗೆ ಅನ್ನದಾಸೋಹ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಬ್ಬು ಬೆಳೆಗಾರರಿಗೆ ಅನುಕೂಲವಾಗಬೇಕೆಂದು ಮೈಷುಗರ್ ಕಾರ್ಖಾನೆ ಪ್ರಾರಂಭವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅನುದಾನ ಕೊಡುವಂತೆ ಮನವಿ ಮಾಡಿದ್ದರು. ಅದಕ್ಕೆ ಸರ್ಕಾರ ಸ್ಪಂದಿಸಿದೆ ಎಂದರು.
ಮಂಡ್ಯ ಕೃಷಿ ಪ್ರಧಾನ ಜಿಲ್ಲೆಯಾಗಿರುವುದರಿಂದ ಚಲುವರಾಯಸ್ವಾಮಿ ಅವರಿಗೆ ಅದೇ ಖಾತೆಯನ್ನು ನೀಡಲಾಗಿದೆ. ಹಿಂದೆ ಎರಡು ಬಾರಿ ಸಚಿವರಾಗಿ ಸಿಆರ್‌ಎಸ್ ಅವರು ಉತ್ತಮ ಕೆಲಸ ಮಾಡಿದ್ದರು. ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದರಂತೆ ಈ ಬಾರಿಯೂ ಹಲವು ಕಾರ್ಯಕ್ರಮ ಜಾರಿಗೆ ತರಲಿದ್ದಾರೆ. ಈ ಮೂಲಕ ಜನರು ಅವರ ಮೇಲಿಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡರಾದ ಅನಿಲ್‌ಕುಮಾರ್, ಧನಂಜಯ್, ರವಿಕುಮಾರ್ ಇತರರಿದ್ದರು.