

ಹಾಸನ: ಇತಿಹಾಸ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ರವಿ ಬೆಳಗೆರೆ ಆ ಸಮಯದಲ್ಲೇ ತನಗೆ ಈ ವೃತ್ತಿ ಇಷ್ಟವಿಲ್ಲ, ನಾನು ದೊಡ್ಡ ಪತ್ರಕರ್ತನಾಗಬೇಕು, ನನ್ನ ಯೋಜನೆಗಳೇ ಬೇರೆ ಇವೆ ಎಂದು ಹೇಳುತ್ತಿದ್ದರು !
ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾದ ಹಿರಿಯ ಪತ್ರಕರ್ತರ ರವಿ ಬೆಳಗೆರೆ ಕುರಿತು ಹಾಸನದ ಸ್ನೇಹಿತರು ಹೇಳುವ ಮಾತಿದು. ಧಾರವಾಡ ವಿಶ್ವವಿದ್ಯಾಲಯದಲ್ಲಿ ಆಗ ತಾನೆ ಎಂಎ ಮುಗಿಸಿದ್ದ ರವಿ ಬೆಳಗೆರೆ 1979-80ರಲ್ಲಿ ಹಾಸನದ ಎಂ. ಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು ಎಂದು ಸ್ನೇಹಿತ ಪರಮೇಶ್ವರಯ್ಯ ಸ್ಮರಿಸಿದರು.
ಉಪನ್ಯಾಸ ವೃತ್ತಿ ಅವರಿಗೆ ಇಷ್ಟವಿರಲಿಲ್ಲ. ಅವರದ್ದು ಯಾವಾಗಲೂ ಕ್ರಾಂತಿಕಾರಿ ಮುಖಭಾವವೇ ಇರುತ್ತಿತ್ತು. ಬಿಡುವಿನ ಸಮಯದಲ್ಲಿ ಪುಸ್ತಕಗಳ ಓದುವುದರಲ್ಲಿ ತಲ್ಲೀಣರಾಗಿರುತ್ತಿದ್ದರು. ಕೆಲ ತಿಂಗಳು ಮಾತ್ರ ಉಪನ್ಯಾಸಕರಾಗಿದ್ದು ಬಳ್ಳಾರಿಗೆ ವಾಸ್ತವ್ಯ ಬದಲಿಸಿದರು ಎಂದು ಅವರ ಆಪ್ತರು 40 ವರ್ಷದ ಘಟನೆಗಳನ್ನು ಮೆಲಕು ಹಾಕುತ್ತಾರೆ.
ಪತ್ರಿಕೋದ್ಯಮದಲ್ಲಿ ಖ್ಯಾತಿ ಸಂಪಾದಿಸುವ ಮೊದಲು ಒಂದು ವರ್ಷ ನಗರದ ಸ್ಥಳಿಯ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ರವಿ ಬೆಳಗೆರೆ ಕಾರ್ಯನಿರ್ವಹಿಸಿದ್ದರು.
ಹಾಸನದಲ್ಲಿ ಕೃ.ನ. ಮೂರ್ತಿ ಸಂಪಾದಕತ್ವದ ’ಜನಮಿತ್ರ’ ಪತ್ರಿಕೆಗೆ ವರದಿಗಾರನಾಗಿ ಸೇರಿದ್ದ ರವಿ ಬೆಳಗೆರೆ, ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ನಗರದಲ್ಲಿದ್ದ ವೇಳೆಯಲ್ಲಿ ಅವರ ಪತ್ನಿ ಲಲಿತಾ ತಮಗೆ ಮಕ್ಕಳಾಗದಿರುವ ಬಗ್ಗೆ ಆತಂಕಗೊಂಡಿದ್ದರು.