

ಬೆಂಗಳೂರು: ಕರೊನಾ ಹಾವಳಿ ಶುರುವಾದ ಬಳಿಕ ಎಷ್ಟೋ ಜನ ವರ್ಕ್ ಫ್ರಮ್ ಹೋಮ್ ಮಾಡಿದ್ದಾರೆ, ಮಾಡುತ್ತಿದ್ದಾರೆ. ಇನ್ನು ಕೆಲವರು ಕೆಲಸ ಮಾಡುತ್ತಿದ್ದ ನಗರ ಬಿಟ್ಟು ತಂತಮ್ಮ ಊರುಗಳಿಗೆ ತೆರಳಿದ್ದಾರೆ. ಆದರೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಲಾಕ್ಡೌನ್ ಅವಧಿಯಲ್ಲಿ ಸದ್ದಿಲ್ಲದೆ ಕೆಲಸ ಮಾಡಿ ಇದೀಗ ಅವರ ಹುಟ್ಟೂರು ಬಸ್ರೂರಿನಲ್ಲಿ ಸೌಂಡ್ ಮಾಡುತ್ತಿದ್ದಾರೆ. ಈ ಮೂಲಕ ವರ್ಕ್ ಫ್ರಮ್ ಹೋಮ್ ಮಾತ್ರವಲ್ಲ, ವರ್ಕ್ ಫ್ರಮ್ ವಿಲೇಜ್ ಕೂಡ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.
ಹೌದು.. 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ, ಬಹುಮುಖ ಪ್ರತಿಭೆ ರವಿ ಬಸ್ರೂರ್ ಇದೀಗ ತಮ್ಮ ಊರಾದ ಬಸ್ರೂರಿನಲ್ಲಿ ಸಿನಿಮಾಸಕ್ತರಿಗೆ, ಸಿನಿಕಲಾವಿದರಿಗೆಂದೇ ಒಂದು ಕೇಂದ್ರವನ್ನು ನಿರ್ಮಿಸಿದ್ದಾರೆ. ಪ್ರಕೃತಿ ಸುಂದರ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಕೇಂದ್ರಕ್ಕೆ ಅವರು 'ರವಿ ಬಸ್ರೂರ್ ಮ್ಯೂಸಿಕ್ ಆ್ಯಂಡ್ ಮೂವೀಸ್' ಎಂಬ ಹೆಸರಿಟ್ಟಿದ್ದಾರೆ. 'ಆಶೀವರ್ದಿಸಿದ ಊರಿಗೆ ಒಂದು ಧನ್ಯವಾದ' ಎಂದು ಅವರು ಪುಟ್ಟ ಗ್ರಾಮ ಬಸ್ರೂರಿನಲ್ಲಿ ಇಂಥದ್ದೊಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಮಾತ್ರವಲ್ಲ 'ವಿಲೇಜ್' ಎಂಬ ಪದಕ್ಕೆ 'ವಿಷನ್ಸ್ ಇನ್ಸ್ಪೈರ್ಡ್ ಲಿವ್ ಲಾಂಗರ್ ಆ್ಯಂಕರಿಂಗ್ ಗ್ರೇಟ್ ಎಕ್ಸಿಸ್ಟೆನ್ಸ್' ಎಂದು ತಮ್ಮದೇ ಆದ ವ್ಯಾಖ್ಯಾನ ನೀಡಿದ್ದಾರೆ.
ಇಲ್ಲಿ ಒಂದು ಸಿನಿಮಾದ ಚಿತ್ರೀಕರಣ ಅಥವಾ ಹಾಡಿನ ಧ್ವನಿಮುದ್ರಣಕ್ಕೆ ಸಾಮಾನ್ಯವಾಗಿ ಬೇಕಾಗುವ ಎಲ್ಲ ವ್ಯವಸ್ಥೆಗಳೂ ಇವೆ. ವಿಡಿಯೋ ಶೂಟ್, ವಿಡಿಯೋ ಕಾನ್ಸೆಪ್ಟ್ ಶೂಟ್, ಡ್ರೋನ್ ಶೂಟ್, ವಿಡಿಯೋ ಎಡಿಟಿಂಗ್, ಕ್ಯಾಪ್ಷನ್ ರೈಟಿಂಗ್, ವಾಯ್ಸ್ ಓವರ್ ಮಾಡಿಸಬಹುದಾದ ಸೌಲಭ್ಯಗಳು ಇಲ್ಲಿವೆ. ಇಷ್ಟೆಲ್ಲ ವ್ಯವಸ್ಥೆ ಇರುವ ಈ ಕೇಂದ್ರವನ್ನು ಸದ್ದಿಲ್ಲದೆ ಮಾಡಿರುವ ರವಿ ಬಸ್ರೂರ್, 'ನಾವು ಸದ್ದಿಲ್ಲದೆ ಕೆಲಸ ಮಾಡಬೇಕು, ನಮ್ಮ ಯಶಸ್ಸು ಸದ್ದು ಮಾಡಬೇಕು' ಎಂದು ಹೇಳಿಕೊಂಡಿದ್ದಾರೆ. ಇನ್ನು ಊರಿನ ಸುತ್ತಮುತ್ತ ಇರುವ ಸಿನಿಮಾಸಕ್ತ ಪ್ರತಿಭೆಗಳನ್ನು ಸೇರಿಸಿಕೊಂಡು ಸಿನಿಮಾಗೆ ಬೇಕಿರುವ ಒಂದು ದೊಡ್ಡ ತಂಡವನ್ನೇ ಕಟ್ಟಿರುವ ರವಿ ಬಸ್ರೂರ್, ತಮ್ಮೂರನ್ನು ಸಿನಿಮಾಕಾಶಿ ಆಗಿಸುವ ಕನಸನ್ನು ಹೊಂದಿದ್ದಾರೆ.