ರೆಸಾರ್ಟ್, ವಿಲ್ಲಾದಲ್ಲಿ ರೇವ್ ಪಾರ್ಟಿ!

Akul Santhosh
Published on

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಆರ್.ವಿ.ದೇವರಾಜ್ ಪುತ್ರ ಯುವರಾಜ್, ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್​ರನ್ನು ಸಿಸಿಬಿ ಪೊಲೀಸರು ಶನಿವಾರ ತೀವ್ರ ವಿಚಾರಣೆ ನಡೆಸಿದ್ದಾರೆ.

ಅಕುಲ್ ಬಾಲಾಜಿಗೆ ಸೇರಿದ ರೆಸಾರ್ಟ್ ಹಾಗೂ ಸಂತೋಷ್​ಗೆ ಸೇರಿದ ವಿಲ್ಲಾಗಳನ್ನು ಬಾಡಿಗೆಗೆ ಕೊಟ್ಟಿದ್ದು, ಅಲ್ಲಿ ಡ್ರಗ್ಸ್ ಪಾರ್ಟಿಗಳು ನಡೆಯುತ್ತಿತ್ತೆಂಬ ಸಂಗತಿ ವಿಚಾರಣೆಯಲ್ಲಿ ಗೊತ್ತಾಗಿದೆ. ಕಾಟನ್​ಪೇಟೆ ಠಾಣೆಯಲ್ಲಿ ದಾಖಲಾದ ಪ್ರಕರಣದ ಆರೋಪಿಗಳ ಜತೆ ನಂಟು ಹೊಂದಿರುವುದು ಸಿಸಿಬಿ ಪೊಲೀಸರಿಗೆ ಕಂಡು ಬಂದಿತ್ತು. ಈ ಸಂಬಂಧ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಸಿಬಿ ಮಾದಕದ್ರವ್ಯ ದಳ ಮೂವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಶನಿವಾರ ಬೆಳಗ್ಗೆ 10.30ರಲ್ಲಿ ಮಾಜಿ ಕಾಪೋ

ರೇಟರ್ ಆರ್.ವಿ. ಯುವರಾಜ್, ಅಕುಲ್ ಬಾಲಾಜಿ, ಸಂತೋಷ್ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಗಮಿಸಿದ್ದರು. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್, ಎಸಿಪಿ ಗೌತಮ್ ಇನ್​ಸ್ಪೆಕ್ಟರ್ ಪುನೀತ್ ಖುದ್ದಾಗಿ ಸತತ 6 ಗಂಟೆ ವಿಚಾರಣೆ ನಡೆಸಿದರು. ದೊಡ್ಡಬಳ್ಳಾಪುರ ತಾಲೂಕಿನ ಲಘುಮೇನಹಳ್ಳಿಯಲ್ಲಿ ಸಮೀಪ ಅಕುಲ್ ಬಾಲಾಜಿಗೆ ಸೇರಿದ ಸನ್​ರೈಸ್ ರೆಸಾರ್ಟ್ ಇದ್ದು, ವೈಭವ್ ಜೈನ್​ಗೆ ಲೀಸ್​ಗೆ ಕೊಟ್ಟಿದ್ದರು. ಅದೇ ರೀತಿ ದೇವನಹಳ್ಳಿ ಸಮೀಪ ಸಂತೋಷ್​ಗೆ ಸೇರಿದ ವಿಲ್ಲಾ ಇದ್ದು, ಅದನ್ನೂ ಬಾಡಿಗೆಗೆ ಪಡೆದಿದ್ದರು. ಇಲ್ಲಿ ರೇವ್ ಪಾರ್ಟಿ, ನೃತ್ಯಕೂಟಗಳನ್ನು ಆಯೋಜನೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಡ್ರಗ್ ಪೆಡ್ಲರ್ ವೈಭವ್ ಜೈನ್, ಆದಿತ್ಯ ಆಳ್ವ ಜತೆಗಿನ ಒಡನಾಟ ಸೇರಿ ಹಲವು ವಿಚಾರಗಳ ಕುರಿತು ತನಿಖಾಧಿಕಾರಿಗಳು ಮೂವರನ್ನೂ ಪ್ರಶ್ನಿಸಿ ವಿವರಣೆ ಪಡೆದಿದ್ದಾರೆ. ವ್ಯವಹಾರಕ್ಕೆ ಸಂಬಂಧಿಸಿದ ಕೆಲ ದಾಖಲಾತಿಗಳನ್ನು ಒದಗಿಸಿದ್ದಾರೆ ಎಂದು ಗೊತ್ತಾಗಿದೆ.

ವೈಭವ್ ಜೈನ್ ನನಗೆ ಜಸ್ಟ್ ಫ್ರೆಂಡ್..

ಸಿಸಿಬಿ ಪೊಲೀಸರ ವಿಚಾರಣೆ ಬಳಿಕ ನಿರೂಪಕ ಅಕುಲ್ ಬಾಲಾಜಿ, ವೈಭವ್ ಜೈನ್ ಜತೆ ಸ್ನೇಹ ಇರುವುದು ನಿಜ. ಆತನೊಂದಿಗೆ ವ್ಯಾವಹಾರಿಕವಾಗಿ ಹೆಚ್ಚಿನ ಒಡನಾಟವಿಲ್ಲ. ಭೇಟಿಯಾದಾಗ ಮಾತನಾಡುವಷ್ಟು ಸ್ನೇಹವಿದೆ. ಇದರಿಂದಾಗಿ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಿರಬಹುದು. ಅವರು ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಗೊತ್ತಿರುವ ವಿಚಾರವನ್ನು ಹೇಳಿದ್ದೇನೆ. ಅಗತ್ಯವಿದ್ದಾಗ ಮತ್ತೆ ವಿಚಾರಣೆಗೆ ಆಗಮಿಸುವಂತೆ ಸೂಚಿಸಿದ್ದಾರೆ. ಪೊಲೀಸರ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಮಧ್ಯವರ್ತಿಯಾಗಿದ್ದ ವೈಭವ್

ಮಾದಕ ವ್ಯಸನಿಯೂ ಆಗಿರುವ ವೈಭವ್ ಜೈನ್, ವಿರೇನ್ ಖನ್ನಾ ಸೂಚನೆ ಮೇರೆಗೆ ಕೆಲಸ ಮಾಡುತ್ತಿದ್ದ. ನಗರದಲ್ಲಿ ಸೂಕ್ತ ಜಾಗಗಳನ್ನು ಬಾಡಿಗೆ ಪಡೆದು ಪಾರ್ಟಿ ಆಯೋಜಿಸುತ್ತಿದ್ದ. ಅದೇ ಪಾರ್ಟಿಯಲ್ಲೇ ಡ್ರಗ್ಸ್ ಪೂರೈಕೆ ಆಗುತ್ತಿತ್ತು. ಜನರನ್ನು ಆಕರ್ಷಿಸಲು ನಟಿಯರನ್ನು ಕರೆತರುತ್ತಿದ್ದರು. ವಿಲ್ಲಾ ಬಾಡಿಗೆ ವಿಚಾರವಾಗಿ ನಟ ಸಂತೋಷ್ ಜೊತೆ ಜಗಳ ಮಾಡಿಕೊಂಡಿದ್ದ. ಇದಾದ ನಂತರ ಅಕುಲ್ ರೆಸಾರ್ಟ್ ಬಾಡಿಗೆ ಪಡೆಯಲು ಮುಂದಾಗಿದ್ದ. ಒಪ್ಪಂದ ಪತ್ರ ಸಿದ್ಧಪಡಿಸುವ ಪ್ರಕ್ರಿಯೆ ಬಾಕಿ ಇತ್ತು. ಅಷ್ಟರಲ್ಲೇ ವೈಭವ್ ಬಂಧನವಾಗಿದೆ. ಇದೇ ರೀತಿಯಲ್ಲೇ ಆತ ಹಲವು ಕಡೆ ಸ್ಥಳಗಳನ್ನು ಬಾಡಿಗೆ ಪಡೆದು ಪಾರ್ಟಿ ನಡೆಸಿದ್ದಕ್ಕೆ ಸಾಕ್ಷ್ಯಗಳಿವೆ. ಆದರೆ, ಪೂರಕವಾದ ಮಾಹಿತಿಯನ್ನು ಅವರು ಬಿಟ್ಟುಕೊಡುತ್ತಿಲ್ಲ. ಹೀಗಾಗಿ ಮತ್ತೇ ವಿಚಾರಣೆಗೆ ಆಗಮಿಸುವಂತೆ ಸೂಚಿಸಲಾಗಿದೆ ಎಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ.

ವಿಲ್ಲಾದಲ್ಲಿ ಅಕ್ರಮ ಚಟುವಟಿಕೆ

ವಿಮಾನ ನಿಲ್ದಾಣ ರಸ್ತೆಯಲ್ಲಿ ನನ್ನದೊಂದು ವಿಲ್ಲಾ ಇತ್ತು. ಬಾಡಿಗೆ ಒಪ್ಪಂದ ಮಾಡಿಕೊಂಡು ವೈಭವ್​ಗೆ ವಿಲ್ಲಾ ನೀಡಿದ್ದೆ. ಆತ ನಡೆಸುವ ಅಕ್ರಮ ಗೊತ್ತಾಗಿ ಒಪ್ಪಂದ ರದ್ದು ಮಾಡಿಕೊಂಡಿದ್ದೇನೆ. ಈಗ ನನಗೂ ಆತನಿಗೂ ಯಾವುದೇ ಸಂಬಂಧವಿಲ್ಲ. ವಿಲ್ಲಾ ಬಾಡಿಗೆಗೆ ಒಪ್ಪಂದ ಮಾಡಿಕೊಂಡಿರುವ ಕುರಿತು ಸಿಸಿಬಿ ನೋಟಿಸ್ ನೀಡಿರಬಹುದು. ವೈಭವ್ ಜೈನ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ ಬಳಿಕ ಆತ ದೊಡ್ಡ ಡ್ರಗ್ ಪೆಡ್ಲರ್ ಎಂಬುದು ನನಗೆ ಗೊತ್ತಾಗಿದೆ. ಯಾವುದೇ ಡ್ರಗ್ ಪೆಡ್ಲರ್​ಗಳ ಜತೆಗೂ ಒಡನಾಟವಿಲ್ಲ. ವ್ಯಸನಿಯೂ ನಾನಲ್ಲ. ಪೊಲೀಸರ ತನಿಖೆಗೆ ಸಹಕರಿಸುತ್ತೇನೆ ಎಂದು ನಟ ಸಂತೋಷ್ ಹೇಳಿದ್ದಾರೆ.

ಯುವರಾಜ್​ನನ್ನು ಪಾರ್ಟಿಗೆ ಆಹ್ವಾನಿಸಿದ್ದ

ಕಾಂಗ್ರೆಸ್ ಮುಖಂಡ ಆರ್.ವಿ. ದೇವರಾಜ್ ಪುತ್ರ ಆರ್.ವಿ. ಯುವರಾಜ್​ಗೆ ವೈಭವ್ ಆತ್ಮಿಯನಾಗಿದ್ದ. ಯುವರಾಜ್​ಗೆ ಹಲವು ಬಾರಿ ಪಾರ್ಟಿಗಳಿಗೆ ಆಹ್ವಾನಿಸಿದ್ದ. ಹೀಗಾಗಿ, ಯುವರಾಜ್ ಅವರನ್ನೂ ವಿಚಾರಣೆಗೆ ಕರೆಯಲಾಗಿತ್ತು. ವೈಭವ್ ನೀಡಿರುವ ಹೇಳಿಕೆ ಹಾಗೂ ಯುವರಾಜ್ ನೀಡಿರುವ ಹೇಳಿಕೆಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net