‘ಪಂಪ್ಡ್ ಸ್ಟೋರೇಜ್’ ವಿರೋಧಿಸಿ ‘ರಾವಣ ದಹನ’

3hnr1 b
Published on

ಹೊನ್ನಾವರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ತಾಲೂಕಿನ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಮಾರೂತಿ ಗುರೂಜಿ ಅವರು ಹಾಗೂ ಭಕ್ತರು ಮೂರು ದಿನಗಳ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು. ವಿಜಯದಶಮಿಯಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಆವರಣದಲ್ಲಿ ‘ರಾವಣ ದಹನ’ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾಂಕೇತಿಕವಾಗಿ ಉಪವಾಸಕ್ಕೆ ಅಂತ್ಯ ಹಾಡಿದರು.

ಶ್ರೀ ಮಾರುತಿ ಗುರೂಜಿ ಅವರು ಮಾತನಾಡಿ, ಪಶ್ಚಿಮ ಘಟ್ಟದಲ್ಲಿ ಪ್ರಕೃತಿಗೆ ವಿರುದ್ಧವಾಗಿ ಅನುಷ್ಠಾನಕ್ಕೆ ತರಲು ಹೊರಟಿರುವ ಯೋಜನೆಗಳನ್ನು ಗುರಿಯಾಗಿಟ್ಟುಕೊಂಡು ಇಂದು ರಾವಣ ಪ್ರತಿಕೃತಿ ದಹಿಸುವ ಮೂಲಕ ವಿರೋಧ ವ್ಯಕ್ತಪಡಿಸಿದ್ದೇವೆ. ಕಾಮಗಾರಿ ಟೆಂಡರ್ ಪ್ರಕ್ರಿಯೆ ಆಗಿರುವ ಬಗ್ಗೆ ಪ್ರಶ್ನಿಸಿದಾಗ, ಈ ಯೋಜನೆಯ ಯಾವುದೇ ಟೆಂಡರ್ ಪ್ರಕ್ರಿಯೆ ಕಾನೂನಾತ್ಮಕವಾಗಿ ಆಗಿಲ್ಲ. ಕೆಲವರು ಯೋಜನೆ ಅಧ್ಯಯನ ಮಾಡದೆ ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೆಪಿಸಿಯವರು ಸಹ ಈ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಸರ್ಕಾರ ಯೋಜನೆ ನಿಲ್ಲಿಸದಿದ್ದರೆ ಅಮರಣಾಂತ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದರು.

ಕ್ರಾಂತಿರಂಗ ಸಂಘಟನೆಯ ಮಂಗಲದಾಸ ನಾಯ್ಕ ಮಾತನಾಡಿ, ನಮ್ಮ ಜಿಲ್ಲೆಯು ಹಲವು ಯೋಜನೆಗಳಿಂದ ಹದಗೆಟ್ಟು ಹೋಗಿದೆ. ಅರಣ್ಯದಲ್ಲಿ ಸುರಂಗ ಹೊಡೆದು ಯೋಜನೆ ಮಾಡಲು ಹೊರಟಿದ್ದಾರೆ. ಇದರಿಂದ ನಮ್ಮ ನೆಲದ ಜನರ ಮತ್ತು ಪ್ರಾಣಿಗಳ ಜೀವಕ್ಕೆ ಕುತ್ತು ಉಂಟಾಗಲಿದೆ. ಈ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದರು.

ಗ್ರಾಪಂ ಅಧ್ಯಕ್ಷೆ ಸುನೀತಾ ಹೆಗಡೆ ಮಾತನಾಡಿ, ಈಗಾಗಲೇ ಗ್ರಾಪಂನಲ್ಲಿ ಠರಾವು ಮಾಡಿ ವಿರೋಧ ವ್ಯಕ್ತಪಡಿಸಿದ್ದೇವೆ ಎಂದರು.

ಶರಾವತಿ ಉಳಿಸಿ ಹೋರಾಟ ಸಮಿತಿಯ ಚಂದ್ರಕಾಂತ ಕೊಚರೇಕರ್, ರೈತ ಸಂಘಟನೆಯ ರಮೇಶ ಕೆಳದಿ, ರಾಮಚಂದ್ರ ಮನೆಗಡ್ಡ, ಸೋಮಶೇಖರ, ಗಣಪತಿ ತಾಳಗುಪ್ಪ, ರಾಜಪ್ಪ ಇತರರಿದ್ದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಮಲೆನಾಡು ಭಾಗದ ಸಕಲ ಜೀವರಾಶಿಗಳಿಗೆ ಮಾರಕವಾಗಿದೆ. ಈ ಯೋಜನೆಗೆ ಈಗಾಗಲೇ ವ್ಯಾಪಕವಾದ ವಿರೋಧ ವ್ಯಕ್ತವಾಗಿದೆ. ಯೋಜನೆಯ ವಿರುದ್ಧ ಯಾವ ಹೋರಾಟಕ್ಕೂ ನಾವು ಸಿದ್ಧ ಜನರು, ಜನಪ್ರತಿನಿಧಿಗಳು, ರೈತರು, ಪರಿಸರ ಹೋರಾಟಗಾರರು ಯೋಜನೆಯ ವಿರುದ್ಧ ಕೈಜೋಡಿಸಬೇಕು | ದಿನೇಶ ಶಿರವಾಳ ರೈತ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net