

ರಟ್ಟಿಹಳ್ಳಿ: ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನಿಸಿರುವುದನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ ಬಜರಂಗ ದಳದ ವತಿಯಿಂದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಗಣೇಶ ಕಟ್ಟೀಮನಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪರಿಷತ್ತಿನ ಸಂಚಾಲಕ ಮೃತ್ಯುಂಜಯ ಬೆಣ್ಣಿ ಮಾತನಾಡಿ, ಈ ಹಿಂದೆ ಜಾರಿಯಲ್ಲಿದ್ದ ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯಲು ರಾಜ್ಯ ಸರ್ಕಾರ ಜೂ. 16ರಂದು ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ. ಭಾರತ ಹಿಂದು ರಾಷ್ಟ್ರವಾಗಿದೆ. ಇಲ್ಲಿ ಹಿಂದುಗಳೊಡನೆ ಅನ್ಯ ಧರ್ಮಿಯರು ಕೂಡ ಸಹಬಾಳ್ವೆಯಿಂದ ಇರಲು ಸಂವಿಧಾನ ಅವಕಾಶ ನೀಡಿದೆ. ರಾಜ್ಯದಲ್ಲಿ ಹಿಂದುಗಳೊಡನೆ ಅನ್ಯಧಮಿರ್ಯರು ತಮ್ಮ ಧರ್ಮ ಪಾಲನೆ ಮಾಡಲು ಅವಕಾಶವಿದೆ. ಆದರೆ, ಅನ್ಯ ಧರ್ಮಿಯರು ಹಿಂದುಗಳಿಗೆ ವಿವಿಧ ಆಸೆ, ಆಮಿಷ ತೋರಿಸಿ ಅಥವಾ ಭಯಪಡಿಸಿ ಬಲವಂತವಾಗಿ ಮತಾಂತರಿಸುವದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಹಿಂದುಗಳನ್ನು ಮತಾಂತರದಿಂದ ರಕ್ಷಿಸುವುದು ನಮ್ಮ ಧರ್ಮವನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿದೆ ಎಂದರು.
ಕಾಂಗ್ರೆಸ್‌ಗೆ ಅನ್ಯ ಧರ್ಮಿಯರಲ್ಲದೇ ಅತಿ ಹೆಚ್ಚು ಸಂಖ್ಯೆಯಲ್ಲಿ ಹಿಂದುಗಳು ಸಹ ಮತ ಹಾಕಿದ್ದಾರೆ. ಹಿಂದುಗಳ ಹೆಚ್ಚಿನ ಮತದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ, ಹೊರತು ಅಲ್ಪಸಂಖ್ಯಾತರಿಂದ ಮತಗಳಿಂದ ಮಾತ್ರವಲ್ಲ. ಈಗ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ನಿರ್ಣಯ ಸಮಸ್ತ ಹಿಂದು ಸಮಾಜಕ್ಕೆ ದ್ರೋಹ ಬಗೆದಂತಾಗಿದೆ. ಕೂಡಲೇ ಮಂತ್ರಿಮಂಡಲವು ಈ ನಿರ್ಣಯವನ್ನು ಹಿಂಪಡೆಯಬೇಕು. ಅಲ್ಲದೆ, ಅಲ್ಪಸಂಖ್ಯಾತರನ್ನು ತುಷ್ಟೀಕರಿಸುವ ಸಲುವಾಗಿ ವೀರ ಸಾವರ್ಕರ್ ಅವರಂತಹ ಅಪತ್ರಿಮ ದೇಶಭಕ್ತರ ಪರಿಚಯದ ಪಾಠಗಳನ್ನು ತೆಗೆಯಲು ನಿರ್ಧರಿಸುವುದು ಕೂಡ ಸರಿಯಲ್ಲ. ಈ ರೀತಿ ಸಮಾಜದಲ್ಲಿ ಶಾಂತಿಯನ್ನು ಕದಡುವ ನಿರ್ಧಾರಗಳನ್ನು ಬಿಟ್ಟು ಉತ್ತಮ ಆಡಳಿತ ನೀಡಲು ಮುಂದಾಗಬೇಕು ಎಂದು ಮನವಿಯಲ್ಲಿ ತಿಳಿಸಿದ್ದೇವೆ ಎಂದರು.
ಮನೋಜ ಗೋಣೆಪ್ಪನವರ, ಆಕಾಶ ಪಾಟೀಲ, ಪಾಂಡು ಪವಾರ, ನಾಗರಾಜ, ಗಣೇಶ ಸುಣಗಾರ, ಮಾಲತೇಶ ಮೂಲಿಮನಿ, ಶರತ್ ಮೂಲಿಮನಿ, ಶಬರೀಶ ಕಾಯಕದ, ರಾಕೇಶ ಉಪಸ್ಥಿತರಿದ್ದರು.