

ರಟ್ಟಿಹಳ್ಳಿ: ರಟ್ಟಿಹಳ್ಳಿ ಗ್ರಾಪಂ ಅನ್ನು ಸರ್ಕಾರ 2020ರ ಫೆಬ್ರವರಿ 12ರಂದು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿದೆ. 2020ರ ಏಪ್ರಿಲ್ 21ರಿಂದ ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಕಾರ್ಯಾರಂಭ ಮಾಡಿದೆ. ಆದರೆ, ಇನ್ನೂತನಕ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಸದೇ ಇದ್ದರಿಂದ ಪಟ್ಟಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ.
ವಾರ್ಡ್ಗಳಲ್ಲಿನ ಗಟಾರ, ರಸ್ತೆ, ವಿದ್ಯುತ್ ಕಂಬದ ಸಮಸ್ಯೆ, ಸ್ವಚ್ಛತೆ ಮರೀಚಿಕೆಯಾಗಿದೆ. ಬೀದಿ ನಾಯಿ, ಹಂದಿಗಳ ಹಾವಳಿ, ಕುಡಿಯುವ ನೀರಿನ ಸಮಸ್ಯೆ ಹೀಗೇ ಹಲವು ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳೇ ಇಲ್ಲ. ಹೀಗಾಗಿ, ಜನರು ಸಮಸ್ಯೆಯನ್ನು ಯಾರಿಗೆ ಹೇಳಬೇಕು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಜನಸಂಖ್ಯೆ ಮತ್ತು ಚೆಕ್ಬಂದಿ ಅನುಗುಣವಾಗಿ ವಾರ್ಡ್ಗಳನ್ನು ವಿಂಗಡಣೆ ಮಾಡಲಾಗಿದೆ. ಉಪವಿಭಾಗಾಧಿಕಾರಿಗಳು 2020ರ ಡಿಸೆಂಬರ್ನಲ್ಲಿ 15 ವಾರ್ಡ್ಗಳನ್ನು ವಿಂಗಡಣೆ ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ವಾರ್ಡ್ ವಿಂಗಡಣೆ ಬಳಿಕ 2022ರಲ್ಲಿ ಮೀಸಲಾತಿ ಘೊಷಿಸಲಾಗಿತ್ತು. ಮೀಸಲಾತಿ ಘೊಷಣೆ ಬಳಿಕ ವಾರ್ಡ್ಗಳಲ್ಲಿ ಆಯಾ ಮೀಸಲಾತಿ ಸ್ಥಾನದ ಆಕಾಂಕ್ಷಿಗಳು ಪಟ್ಟಣದಲ್ಲಿ ಅನೇಕ ಕೆಲಸ ಕಾರ್ಯಗಳನ್ನು ಕೈಗೊಂಡಿದ್ದಾರೆ. ಚುನಾವಣೆ ಘೊಷಣೆಗೆ ಚಾತಕ ಪಕ್ಷಿಗಳಂತೆ ಕಾಯತ್ತಿದ್ದಾರೆ.
ವಾರ್ಡ್ ಸಂಖ್ಯೆ-1 ಪರಿಶಿಷ್ಟ ಪಂಗಡ, ವಾ-2 ಹಿಂದುಳಿದ ವರ್ಗ (ಎ), ವಾ-3 ಹಿಂದುಳಿದ ವರ್ಗ (ಎ) ಮಹಿಳೆ, ವಾ-4 ಸಾಮಾನ್ಯ, ವಾ-5 ಹಿಂದುಳಿದ ವರ್ಗ (ಬಿ), ವಾ-6 ಸಾಮಾನ್ಯ ಮಹಿಳೆ, ವಾ-7 ಹಿಂದುಳಿದ ವರ್ಗ (ಎ) ಮಹಿಳೆ, ವಾ-8 ಸಾಮಾನ್ಯ ಮಹಿಳೆ, ವಾ-9 ಸಾಮಾನ್ಯ, ವಾ-10 ಹಿಂದುಳಿದ ವರ್ಗ (ಎ), ವಾ-11 ಸಾಮಾನ್ಯ ಮಹಿಳೆ, ವಾ-12 ಸಾಮಾನ್ಯ ಮಹಿಳೆ, ವಾ-13 ಸಾಮಾನ್ಯ, ವಾ-14 ಪರಿಶಿಷ್ಟ ಜಾತಿ, ವಾ-15 ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿ ನಗರಾಭಿವೃದ್ಧಿ ಇಲಾಖೆ ಮೀಸಲಾತಿ ಘೊಷಿಸಿದೆ.
2011ರ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್ಗಳ ಮರುವಿಂಗಣೆ ಮಾಡಲಾಗಿದೆ. ಸದ್ಯ ಎಲ್ಲ ವಾರ್ಡ್ಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್ಗಳನ್ನು ವಿಂಗಡಿಸಬೇಕಿದೆ. ರಟ್ಟಿಹಳ್ಳಿ ಪಪಂ ಆಗಿ ವರ್ಷಗಳೇ ಕಳೆದಿವೆ. ಚುನಾವಣೆ ಆಗದಿರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಸರ್ಕಾರ ಶೀಘ್ರ ಚುನಾವಣೆ ನಡೆಸಬೇಕು. | ರವೀಂದ್ರ ಮುದಿಯಪ್ಪನವರ, ಗ್ರಾಪಂ ಮಾಜಿ ಅಧ್ಯಕ್ಷ ರಟ್ಟಿಹಳ್ಳಿ ರಟ್ಟಿಹಳ್ಳಿಯ ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ಸಂಬಂಧಿಸಿ ಎಲ್ಲ ಮಾಹಿತಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ. ಪಟ್ಟಣ ಪಂಚಾಯಿತಿ ಚುನಾವಣೆ ಘೊಷಣೆ ಸರ್ಕಾರ ಮತ್ತು ಚುನಾವಣೆ ಆಯೋಗಕ್ಕೆ ಸಂಬಂಧಪಟ್ಟ ವಿಷಯ. ಶೀಘ್ರದಲ್ಲಿ ಘೊಷಣೆಯಾಗುವ ಸಾಧ್ಯತೆ ಇದೆ. | ಕೆ. ಗುರುಬಸವರಾಜ, ತಹಸೀಲ್ದಾರ್ ರಟ್ಟಿಹಳ್ಳಿ