

ರಟ್ಟಿಹಳ್ಳಿ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿದ್ದು, ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಸದಸ್ಯ ರವೀಂದ್ರ ಮುದಿಯಪ್ಪನವರ ಅಧ್ಯಕ್ಷರಾಗಿ ಹಾಗೂ ಪಕ್ಷೇತರ ಶಿವಕುಮಾರ ಉಪ್ಪಾರ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಪ.ಪಂ. ಕರ್ಣಧಾರತ್ವಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಸಾಮಾನ್ಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ಲಲಿತಾ ಚೆನ್ನಗೌಡ್ರು ಮತ್ತು ರವೀಂದ್ರ ಮುದಿಯಪ್ಪನವರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ಮಖಬುಲ್ಲಸಾಬ್ ಮುಲ್ಲಾ ಮತ್ತು ಬಿಜೆಪಿ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿ ಶಿವಕುಮಾರ ಉಪ್ಪಾರ ನಾಮಪತ್ರ ಸಲ್ಲಿಸಿದ್ದರು.
ರವೀಂದ್ರ ಮುದಿಯಪ್ಪನವರ ಹಾಗೂ ಶಿವಕುಮಾರ ಉಪ್ಪಾರ ಪರವಾಗಿ ಬಿಜೆಪಿಯ 6 ಸದಸ್ಯರು ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಕೈ ಎತ್ತಿದರು. ಈ ಮೂಲಕ 9 ಮತ ಬಲದೊಂದಿಗೆ ಅಧ್ಯಕ್ಷರಾಗಿ ರವೀಂದ್ರ ಮುದಿಯಪ್ಪನವರ ಹಾಗೂ ಉಪಾಧ್ಯಕ್ಷರಾಗಿ ಶಿವಕುಮಾರ ಉಪ್ಪಾರ ಆಯ್ಕೆಯಾದರು. ಕಾಂಗ್ರೆಸ್ ಅಭ್ಯರ್ಥಿಗಳಾದ ಲಲಿತಾ ಚೆನ್ನಗೌಡ್ರು, ಮಖಬುಲ್ಸಾಬ್ ಮುಲ್ಲಾ ತಲಾ 8 ಮತ ಪಡೆದು ಪರಾಭವಗೊಂಡರು. ಫಲಿತಾಂಶವನ್ನು ಚುನಾವಣಾಧಿಕಾರಿ ತಹಸೀಲ್ದಾರ್ ಶ್ವೇತಾ ಅಮರಾವತಿ ಪ್ರಕಟಿಸಿದರು.
ಮಾಜಿ ಸಚಿವ ಬಿ.ಸಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಬಿಜೆಪಿ ಮಂಡಲ ಅಧ್ಯಕ್ಷ ದೇವರಾಜ ನಾಗಣ್ಣನವರ, ಶಂಭಣ್ಣ ಗೂಳಪ್ಪನವರ, ಆರ್.ಎನ್. ಗಂಗೋಳ, ಫಾಲಾಕ್ಷಗೌಡ ಪಾಟೀಲ, ಮಾಲತೇಶ ಗಂಗೋಳ, ಸಂದೀಪ ಪಾಟೀಲ, ರಾಘವೇಂದ್ರ ಹರವಿಶೆಟ್ಟರ್, ಪರಮೇಶಪ್ಪ ಹಲಗೇರಿ, ಹನುಮಂತಪ್ಪ ಗಾಜೇರ, ಮಂಜು ತಳವಾರ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
15 ಸದಸ್ಯ ಬಲದ ಪಪಂ ಚುನಾವಣೆಯಲ್ಲಿ ಕಾಂಗ್ರೆಸ್ 7, ಬಿಜೆಪಿ 6, ಪಕ್ಷೇತರ 2 ಸದಸ್ಯರು ಆಯ್ಕೆಯಾಗಿದ್ದರು. ಬಹುಮತಕ್ಕೆ 8 ಮತ ಬೇಕಿತ್ತು. ಹೀಗಾಗಿ, ಪಕ್ಷೇತರರಾಗಿ ಗೆದ್ದಿದ್ದ ಲಲಿತಾ ಚೆನ್ನಗೌಡ್ರು, ಶಿವಕುಮಾರ ಉಪ್ಪಾರ ಅವರನ್ನು ಮೊನ್ನೆಯಷ್ಟೆ ಹಾವೇರಿಯಲ್ಲಿ ಕಾಂಗ್ರೆಸ್ಗೆ ಸೇರಿಸಿಕೊಳ್ಳಲಾಗಿತ್ತು. ಹೀಗಾಗಿ, ಕಾಂಗ್ರೆಸ್ ಬಲ ಶಾಸಕ ಯು.ಬಿ. ಬಣಕಾರ ಮತದೊಂದಿಗೆ 10ಕ್ಕೇರಿತ್ತು. ಅಧಿಕಾರ ಹಿಡಿಯುವುದು ನಿಶ್ಚಿತವಾಗಿತ್ತು.
ಒಂದು ದಿನದ ಹಿಂದೆ ಪಕ್ಷದಲ್ಲಿ ಉಂಟಾದ ಅಸಮಾಧಾನ ಕಾಂಗ್ರೆಸ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದೆ. ಅಧ್ಯಕ್ಷ ಸ್ಥಾನಕ್ಕೆ ಲಲಿತಾ ಚೆನ್ನಗೌಡ್ರ ಅವರನ್ನು ಅಭ್ಯರ್ಥಿ ಮಾಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ರವೀಂದ್ರ ಮುದಿಯಪ್ಪನವರ ಹಾಗೂ ಕಾಂಗ್ರೆಸ್ ಸೇರಿದ್ದ ಪಕ್ಷೇತರ ಶಿವಕುಮಾರ ಉಪ್ಪಾರ ಅವರು ಬೆಳಗಾಗುವಷ್ಟರಲ್ಲಿ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ, ಇಬ್ಬರೂ ಅನುಕ್ರಮವಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಹುರಿಯಾಳು ಆಗಿ, ಹುದ್ದೆಗೇರುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ನಲ್ಲಿನ ಅಸಮಾಧಾನವನ್ನು ಉಪಯೋಗಿಸಿಕೊಂಡು ರವೀಂದ್ರ ಮುದಿಯಪ್ಪನವರ ಹಾಗೂ ಶಿವಕುಮಾರ ಉಪ್ಪಾರ ಅವರನ್ನು ತನ್ನತ್ತ ಸೆಳೆದ ಬಿಜೆಪಿ, ಸಂಸದ ಬಸವರಾಜ ಬೊಮ್ಮಾಯಿ ಅವರ ಮತ ಬಳಸಿಕೊಂಡು ಪಪಂ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶ ಕಂಡಿದೆ. ಇತ್ತ ಕಾಂಗ್ರೆಸ್ನ ಲೆಕ್ಕಾಚಾರಗಳೆಲ್ಲ ತಿರುವು ಮುರುವು ಆಗಿ ಅಧಿಕಾರದಿಂದ ದೂರ ಉಳಿಯುವಂತಾಗಿದೆ.
ರಟ್ಟಿಹಳ್ಳಿ ಗ್ರಾಪಂ ಇದ್ದಾಗಲೂ ಮತ್ತು ಪಪಂ ಆದ ಮೇಲೆಯೂ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ನಾನು ಮೂಲತಃ ಬಿಜೆಪಿಯಲ್ಲಿ ಕಾರ್ಯಕರ್ತರಾಗಿ ಶಾಸಕ ಯು.ಬಿ. ಬಣಕಾರ ಅವರ ಪರ ದುಡಿದಿದ್ದೇನೆ. ಸಾಮಾನ್ಯ ಮೀಸಲಾಗಿದ್ದ ಅಧ್ಯಕ್ಷ ಸ್ಥಾನ ಮೊದಲಿಗೆ ಕೆಲ ತಿಂಗಳು ನೀಡುವಂತೆ ಮನವಿ ಮಾಡಿದ್ದೆ. ಆದರೆ, ಕಾಂಗ್ರೆಸ್ ಪಕ್ಷದ ನಡೆಯಿಂದ ಅಸಮಾಧಾನಗೊಂಡು ಬಿಜೆಪಿ ಸದಸ್ಯರ ಬಲದೊಂದಿಗೆ ಅಧ್ಯಕ್ಷನಾಗಿದ್ದೇನೆ. ಯಾವುದೇ ಕಪ್ಪುಚುಕ್ಕೆ ಬಾರದಂತೆ ಎಲ್ಲ ಸದಸ್ಯರ ಸಹಕಾರದೊಂದಿಗೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. | ರವೀಂದ್ರ ಮುದಿಯಪ್ಪನವರ, ನೂತನ ಅಧ್ಯಕ್ಷ ರಟ್ಟಿಹಳ್ಳಿ ಪಪಂ ಪಕ್ಷೇತರರ ಮೇಲೆ ಕಾಂಗ್ರೆಸ್ನವರು ಒತ್ತಡ ಹೇರಿದ್ದರು. ರವೀಂದ್ರ ಮುದಿಯಪ್ಪನವರ ಅವರು ಕಾಂಗ್ರೆಸ್ ಪಕ್ಷದಲ್ಲಿಯ ಬೆಳವಣಿಗೆಯಿಂದ ಅಸಮಾಧಾನಗೊಂಡು ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಸೇರ್ಪಡೆಯಾಗಿದ್ದಾರೆ. ಅವರು ಸೂಕ್ತ ತೀರ್ವನದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. | ಬಸವರಾಜ ಬೊಮ್ಮಾಯಿ, ಸಂಸದ ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಸದಸ್ಯನಿಗೆ ಮತ ಚಲಾಯಿಸಿದ್ದಾರೆ. ವಿಪ್ ಉಲ್ಲಂಘಿಸಿರುವ ರವೀಂದ್ರ ಮುದಿಯಪ್ಪವರ ಹಾಗೂ ಶಿವಕುಮಾರ ಉಪ್ಪಾರಗೆ ನೋಟಿಸ್ ನೀಡಲಾಗುವುದು. | ಶಾಸಕ ಯು.ಬಿ. ಬಣಕಾರ