ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಕೈ ವಶ

RTL PAPUM
Published on

ರಟ್ಟಿಹಳ್ಳಿ: ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಅತಂತ್ರವಾಗಿರುವ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿ ಲಲಿತಾ ಚನ್ನಗೌಡ್ರ ಕಾಂಗ್ರೆಸ್​ಗೆ ಬೆಂಬಲ ಸೂಚಿಸಿದ್ದು ಪಪಂ ಕೈ ವಶವಾಗುವ ಸಾಧ್ಯತೆ ದಟ್ಟವಾಗಿದೆ.

ಲಲಿತಾ ಅವರ ಮಗ ಶಂಕರಗೌಡ ಚೆನ್ನಗೌಡ್ರ ಗುರುವಾರ ಬೆಂಗಳೂರಿನ ವಿಧಾನಸೌಧ ಕಚೇರಿಯಲ್ಲಿ ಸಿಎಂ ಸಿದ್ದರಾಮ್ಯಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಶಾಸಕ ಯು.ಬಿ. ಬಣಕಾರ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ನೇತೃತ್ವದಲ್ಲಿ ಕಾಂಗ್ರೆಸ್​ಗೆ ಬೆಂಬಲ ಸೂಚಿಸಿದ್ದಾರೆ.

ಪಪಂ ಚುನಾವಣೆಯಲ್ಲಿ ಕಾಂಗ್ರೆಸ್ -7, ಬಿಜೆಪಿ 6 ಮತ್ತು ಪಕ್ಷೇತರರು ಎರಡು ಸ್ಥಾನಗಳನ್ನು ಗೆಲುವು ಸಾಧಿಸಿದ್ದಾರೆ. ಬಹುಮತಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಅವಶ್ಯವಿದ್ದ ಒಂದು ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಲಲಿತಾ ಚೆನ್ನಗೌಡ್ರ ಅವರ ಮನವೊಲಿಸುವಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರು ಪಕ್ಷದ ಮುಖಂಡರು ಯಶಸ್ವಿಯಾಗಿದ್ದಾರೆ.

ಮೊದಲಿನಿಂದಲೂ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಶಂಕರಗೌಡ ಚೆನ್ನಗೌಡ ಬಿಜೆಪಿಗೆ ಬೆಂಬಲ ಸೂಚಿಸುತ್ತಾರೆ ಎನ್ನುವ ಲೆಕ್ಕಾಚಾರ ಹುಸಿಯಾಗಿದೆ. ಉಳಿದಂತೆ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಶಿವಕುಮಾರ ಉಪ್ಪಾರ ಯಾವ ಪಕ್ಷಕ್ಕೆ ಬೆಂಬಲಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಪಿ.ಡಿ. ಬಸನಗೌಡ್ರು ಮಾತನಾಡಿ, ಆಡಳಿತರೂಢ ಕಾಂಗ್ರೆಸ್​ಗೆ ಪಕ್ಷೇತರ ಅಭ್ಯರ್ಥಿ ಪರವಾಗಿ ಅವರ ಮಗನಾದ ಶಂಕರಗೌಡ ಚೆನ್ನಗೌಡ್ರ ಕಾಂಗ್ರೆಸ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಯಾವ ಬೇಡಿಕೆಯೂ ಇಡದೆ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಈಗ ನಿಚ್ಚಳ ಬಹುಮತ ಪಡೆದಿದ್ದು, ಅಧಿಕಾರದ ಗದ್ದುಗೆ ಹಿಡಿಯಲಿದೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ ಎಂದು ಹೇಳಿದರು.

ಶಾಸಕ ಯು.ಬಿ. ಬಣಕಾರ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಕಾಂಗ್ರೆಸ್ ಪಪಂ ಸದಸ್ಯರು, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಶಾಸಕ ಬಸವರಾಜ ಶಿವಣ್ಣನವರ, ವಸಂತ ದ್ಯಾವಕ್ಕಳವರ, ಬಾಬುಸಾಬ ಜಡದಿ, ರಮೇಶ ಕಟ್ಟೇಕಾರ, ಜಾಕೀರ ಮುಲ್ಲಾ, ಇತರರಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದು, ಪಟ್ಟಣದ ಅಭಿವೃದ್ಧಿಗಾಗಿ ಕಾಂಗ್ರೆಸ್​ಗೆ ಬೆಂಬಲ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಮನ್ನಣೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. | ಶಂಕರಗೌಡ ಚೆನ್ನಗೌಡ್ರು ಅಧ್ಯಕ್ಷ, ಸ್ವಾಭಿಮಾನಿ ಜನಹಿತ ವೇದಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net