

ರಟ್ಟಿಹಳ್ಳಿ: ಯುವತಿ ಸ್ವಾತಿ ಹತ್ಯೆ ಘಟನೆ ಆಘಾತಕಾರಿಯಾಗಿದೆ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಮಗಳಿಗೆ ಶಿಕ್ಷಣ ಕೊಡಿಸಿ, ಇನ್ನೇನು ಬದುಕು ರೂಪಿಸಿಕೊಳ್ಳುವ ಸಮಯದಲ್ಲಿ ದುರ್ಘಟನೆ ನಡೆದಿರುವುದು ದುಃಖ ತಂದಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಜಿ ಸಚಿವ ಬಿ.ಸಿ. ಪಾಟೀಲ ಅವರೊಂದಿಗೆ ಶನಿವಾರ ತಾಲೂಕಿನ ಮಾಸೂರು ಗ್ರಾಮದಲ್ಲಿ ಮೃತ ಯುವತಿ ಸ್ವಾತಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದರು. ಪೊಲೀಸರು ಶವ ಪರೀಕ್ಷೆ ಮಾಡಿಸಿ ಕುಟುಂಬಕ್ಕೆ ತಿಳಿಸದೆ ತರಾತುರಿಯಲ್ಲಿ ಅಂತ್ಯಸಂಸ್ಕಾರ ನಡೆಸಿರುವುದು ಖಂಡನೀಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಮೇಲ್ನೋಟಕ್ಕೆ ಇದು ಜಿಹಾದ್ ಪ್ರಕರಣದಂತೆ ಕಾಣುತ್ತಿದ್ದು, ಸೂಕ್ತ ತನಿಖೆಯಾಗಬೇಕು. ಸಮಾಜದಲ್ಲಿ ಯುವತಿಯರ ದಾರಿ ತಪ್ಪಿಸುವ ಕೆಲಸವಾಗಬಾರದು. ಇದೊಂದು ಸಾಮಾಜಿಕ ಪಿಡುಗಾಗಿದೆ. ಕುಟುಂಬದ ಜತೆ ನಾವಿದ್ದೇವೆ ಎಂದು ಸಾಂತ್ವನ ಹೇಳಿದರು.
ಮೃತ ಸ್ವಾತಿ ತಾಯಿಗೆ ಬೊಮ್ಮಾಯಿ ಧೈರ್ಯ ಹೇಳಲು ಮುಂದಾದಾಗ, ‘ಸರ್ ನನ್ನ ಮಗಳಿಗೆ ಆಗಿರುವ ಅನ್ಯಾಯ ಮತ್ಯಾವ ಹೆಣ್ಣು ಮಕ್ಕಳಿಗೂ ಆಗಬಾರದು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು’ ಎಂದು ಮನವಿ ಮಾಡಿದರು.
ಪ್ರತಿಕ್ರಿಯಿಸಿದ ಸಂಸದ ಬೊಮ್ಮಾಯಿ, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ತನಿಖೆ ಚುರುಕಾಗುತ್ತದೆ. ಬಳಿಕ ಕೆಲವು ಒತ್ತಡಗಳಿಂದ ತನಿಖೆ ಸಡಿಲವಾಗಿ ಬಿಡುತ್ತದೆ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ತನಿಖೆ ಚುರುಕುಗೊಳಿಸಿ ತಪ್ಪಿತಸ್ಥ ಆರೋಪಿಗಳಿಗೆ ಉಗ್ರ ಶಿಕ್ಷ ನೀಡುವಂತಾಗಬೇಕು ಎಂದು ಆಗ್ರಹಿಸಿದರು.