ಕನ್ನಡ ಭಾಷೆಗೆ ಮಾತೃ ಸ್ಥಾನ ನೀಡುವುದು ಅಗತ್ಯ

13-rtl
Published on

ರಟ್ಟಿಹಳ್ಳಿ: ಪ್ರತಿಯೊಬ್ಬರೂ ಕನ್ನಡ ಭಾಷೆಗೆ ಮಾತೃ ಸ್ಥಾನ ನೀಡಬೇಕು. ಉಳಿದ ಭಾಷೆಗಳನ್ನು ಗೌರವಿಸಬೇಕು ಹೊರತು ಪರ ಭಾಷೆಗಳ ವ್ಯಾಮೋಹಕ್ಕೆ ಒಳಗಾಗಬಾರದು ಎಂದು ಪ್ರಿಯದರ್ಶಿನಿ ಕಾಲೇಜ್ ಪ್ರಾಧ್ಯಾಪಕ ಡಾ. ಚಾಮರಾಜ ಕಮ್ಮಾರ ಹೇಳಿದರು.
ಪಟ್ಟಣದ ಲಯನ್ಸ್ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಶನಿವಾರ ಏರ್ಪಡಿಸಿದ್ದ 2023-24ನೇ ಸುವರ್ಣ ಕರ್ನಾಟಕ ನುಡಿ ಸಂಭ್ರಮದಲ್ಲಿ ಅವರು ಮಾತನಾಡಿದರು.
ಪ್ರಾಚೀನ ಕಾಲದಿಂದ ಕನ್ನಡ ಭಾಷೆಗೆ ತನ್ನದೇ ಆದ ಮಹತ್ವವಿದೆ. ಇತರ ಭಾಷೆಗಳ ಪದಗಳು ಸಹ ಕನ್ನಡ ಭಾಷೆಯಲ್ಲಿ ಪರಿವರ್ತನೆಯಾದ ಉದಾಹರಣೆಗಳಿವೆ. ನಮ್ಮ ಭಾವನೆ, ಪ್ರೀತಿ, ಸಹೋದರತೆಯನ್ನು ಕನ್ನಡ ಜಾನಪದ ಸಾಹಿತ್ಯದಲ್ಲಿ ಕೂಡ ಕಾಣಬಹುದಾಗಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಆರ್.ಜಿ. ದ್ಯಾವಕ್ಕಳವರ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿ ಡಾ. ನಿಂಗಪ್ಪ ಚಳಗೇರಿ ಮಾತನಾಡಿ, 2,500 ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಮಾನ ಪಡೆದಿದೆ. 8 ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಹೆಮ್ಮೆಯ ಭಾಷೆಯಾಗಿದೆ ಎಂದರು.
ಹಾವೇರಿ ಹಾಲು ಒಕ್ಕೂಟ ಕಲ್ಯಾಣ ಸಂಘದ ಅಧ್ಯಕ್ಷ ಹನುಮಂತಗೌಡ ಭರಮಣ್ಣನವರ ಮಾತನಾಡಿ, ಕನ್ನಡ ನಾಡು, ನುಡಿ ಭಾಷೆಯ ಜಾಗೃತಿ ಕುರಿತು ಕಸಾಪ ರಟ್ಟಿಹಳ್ಳಿ ತಾಲೂಕು ವತಿಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಲೂಕಿನ ಹಾಲು ಒಕ್ಕೂಟದಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎನ್.ಸಿ. ಕಠಾರೆ ಮಾತನಾಡಿ, ನವೆಂಬರ್‌ನಿಂದ ಪ್ರಾರಂಭವಾಗುವ ಸುವರ್ಣ ಕರ್ನಾಟಕ ನುಡಿ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸಲು ಕಸಾಪ ಸದಸ್ಯರು, ಪದಾಧಿಕಾರಿಗಳು ಮತ್ತು ಲಯನ್ಸ್ ಶಾಲೆಯ ಶಿಕ್ಷಕರ ಸಹಕಾರ ಸ್ಮರಣೀಯ ಎಂದರು.
ಸಾಹಿತಿ ಎಎಸ್‌ಐ ಅಶೋಕ ಕೊಂಡ್ಲಿ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷೆ ರೇಣುಕಾ ಗೂಳಪ್ಪನವರ, ಪಿ.ಡಿ. ಬಸನಗೌಡ್ರ, ಗಣೇಶ ವೆರ್ಣೇಕರ, ಕೆ.ಆರ್. ಕೋಣ್ತಿ, ಕೆ.ವೈ. ಬಾಜೀರಾಯರ, ರಾಮಣ್ಣ ಕೆಂಚಳ್ಳೇರ, ಸಿ.ಎಫ್. ಜಾಡರ, ಡಾ. ಮಂಜುನಾಥ ತಲ್ಲೂರ, ಗುಡ್ಡಚಾರಿ ಕಮ್ಮಾರ, ಹಾಲನಗೌಡ ಮುದಗೌಡ್ರ, ಸುರೇಶ ಬೆಣ್ಣಿ, ವಿ.ಎಸ್. ಅರ್ಕಚಾರಿ, ಕೃಷ್ಣರಾಜ ವೆರ್ಣೇಕರ, ಸುರೇಶ ಮಲ್ಲಾಡದ, ಎಸ್.ಎಸ್. ಬಾಳೇಕಾಯಿ, ರಾಜು ಹರವಿಶೆಟ್ಟರ್ ಕಸಾಪ ಪದಾಧಿಕಾರಿಗಳು, ಲಯನ್ಸ್ ಶಾಲೆ ಸಿಬ್ಬಂದಿ ಇದ್ದರು. ಸಿ.ಎಸ್. ಚಕ್ರಸಾಲಿ, ಸಿ.ಡಿ. ಕರಿಯಣ್ಣನವರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net