

ರಟ್ಟಿಹಳ್ಳಿ: ಪಟ್ಟಣದ ಮಾಸೂರು ರಸ್ತೆಯ ಹಳೆಯ ತೋಟಗಾರಿಕೆ ಕಟ್ಟಡದಲ್ಲಿ ಸಂಚಾರಿ ದಿವಾಣಿ ಜೆಎಂಎಫ್ಸಿ ನ್ಯಾಯಾಲಯ ಪ್ರಾರಂಭಿಸಲು ಸರ್ಕಾರ ಮತ್ತು ಹೈಕೋರ್ಟ್ ಆದೇಶಿಸಿತ್ತು. ಅದರಂತೆ ಹಳೆಯ ಕಟ್ಟಡವನ್ನು ನ್ಯಾಯಾಲಯದ ಕಾರ್ಯ ಕಲಾಪಗಳಿಗೆ ಅನುಗುಣವಾಗಿ ಮಾರ್ಪಾಡುಗೊಳಿಸುವ ಕಾಮಗಾರಿ ಪೂರ್ಣಗೊಂಡಿದೆ. ಡಿ. 15ರಂದು ರಟ್ಟಿಹಳ್ಳಿಯಲ್ಲಿ ನ್ಯಾಯಾಲಯದ ಉದ್ಘಾಟನೆ ಸಮಾರಂಭ ಏರ್ಪಾಟಾಗಿದೆ. ಕಟ್ಟಡ ಮಾರ್ಪಾಡಿಗೆ 30 ಲಕ್ಷ ರೂ. ವೆಚ್ಚ: ಲೋಕೋಪಯೋಗಿ ಇಲಾಖೆಯಿಂದ 30 ಲಕ್ಷ ರೂ. ವೆಚ್ಚದಲ್ಲಿ ಹಳೆಯ ಕಟ್ಟಡ ಮಾರ್ಪಾಡು ಮಾಡಲಾಗಿದೆ. ಕಟ್ಟಡದಲ್ಲಿ ಸ್ಟೇಜ್ ನಿರ್ವಣ, ಫ್ಲೋರಿಂಗ್, ಬಾಗಿಲು, ಹವಾನಿಯಂತ್ರಿತ ಕೊಠಡಿ ವ್ಯವಸ್ಥೆ, ಅಲ್ಯುಮಿನಿಯಂ ಕಿಟಕಿಗಳು, ಶೌಚಗೃಹ ವ್ಯವಸ್ಥೆ, ಪಕ್ಕದ ಪ್ರವಾಸಿ ಮಂದಿರದಿಂದ ಬೋರ್ವೆಲ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಶುದ್ಧ ಕುಡಿಯುವ ನೀರು, ಬಣ್ಣ ಮತ್ತು ವಿದ್ಯುತ್ ಸೌಲಭ್ಯ ಸೇರಿದಂತೆ ಕಟ್ಟಡಕ್ಕೆ ಸಕಲ ಮೂಲಸೌಲಭ್ಯ ಒದಗಿಸಲಾಗಿದೆ. ನ್ಯಾಯಾಲಯ ವ್ಯಾಪ್ತಿಗೆ 63 ಗ್ರಾಮಗಳು: ರಟ್ಟಿಹಳ್ಳಿ ಪಟ್ಟಣ ಸೇರಿದಂತೆ ತಾಲೂಕಿನ 63 ಗ್ರಾಮಗಳಿಗೆ ಸಂಬಂಧಿಸಿದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತವೆ. ಈ ಮೊದಲು ಎಲ್ಲ ಪ್ರಕರಣಗಳು ಹಿರೇಕೆರೂರು ನ್ಯಾಯಾಲಯದ ಮೊರೆ ಹೋಗುತ್ತಿದ್ದರಿಂದ ತಾಲೂಕಿನ ಹಳ್ಳೂರು, ಕಮಲಾಪುರ, ಗುಡ್ಡದಮಾದಾಪುರ, ಮೈದೂರು, ಕಿರಗೇರಿ, ಹಿರೇಕಬ್ಬಾರ, ಚಿಕ್ಕಕಬ್ಬಾರ ಸೇರಿ ಅನೇಕ ಗ್ರಾಮಗಳ ಜನರು ಸುಮಾರು 35 ರಿಂದ 40 ಕಿ.ಮೀ. ದೂರ ಕ್ರಮಿಸಬೇಕಾಗಿತ್ತು. ಪ್ರಸ್ತುತ ರಟ್ಟಿಹಳ್ಳಿ ತಾಲೂಕು ಕೇಂದ್ರದಲ್ಲಿ ನ್ಯಾಯಾಲಯ ಆರಂಭಿಸುವುದರಿಂದ ತಾಲೂಕಿನ ಎಲ್ಲ ಗ್ರಾಮಗಳ ಕಕ್ಷಿಗಾರರಿಗೆ ಮತ್ತು ಈ ಭಾಗದ ವಕೀಲರಿಗೆ ಅನುಕೂಲವಾಗಲಿದೆ. ತಾಲೂಕು ವಕೀಲರ ಸಂಘ ರಚನೆ: ಪಟ್ಟಣದಲ್ಲಿ ನೂತನ ನ್ಯಾಯಾಲಯ ಆರಂಭವಾಗುವ ಹಿನ್ನೆಲೆಯಲ್ಲಿ ಈಗಾಗಲೇ ರಟ್ಟಿಹಳ್ಳಿ ತಾಲೂಕು ವಕೀಲರ ಸಂಘವನ್ನು ರಚಿಸಲಾಗಿದೆ. ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವರನ್ನು ವಕೀಲರ ಸಂಘದ ತಾಲೂಕು ಅಧ್ಯಕ್ಷರನ್ನಾಗಿ ಮಾಡಿ ವಿವಿಧ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಡಿ. 15 ರಂದು ಕೋರ್ಟ್ ಕಟ್ಟಡ ಉದ್ಘಾಟನೆ: ಪಟ್ಟಣದಲ್ಲಿ ಸಿದ್ಧಗೊಂಡಿರುವ ನ್ಯಾಯಾಲಯದ ಕಟ್ಟಡ ಉದ್ಘಾಟನೆ ಸಮಾರಂಭವನ್ನು ಡಿ. 15ರಂದು ಬೆಳಗ್ಗೆ 11ಕ್ಕೆ ನಿಗದಿ ಮಾಡಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಹಾವೇರಿ ಜಿಲ್ಲಾ ನ್ಯಾಯಾಡಳಿತ ಉಸ್ತುವಾರಿ ನ್ಯಾಯಾಧೀಶರು ಹೇಮಂತ್ ಚಂದನಗೌಡ್ರು ನೇರವೇರಿಸುವರು. ನ್ಯಾಯವಾದಿಗಳ ಸಂಘದ ಉದ್ಘಾಟನೆಯನ್ನು ಹೈಕೋರ್ಟ್ ಹಿರಿಯ ನ್ಯಾಯಾಧೀಶರಾದ ಕೃಷ್ಣ ದೀಕ್ಷಿತ ನೆರವೇರಿಸುವರು. ಕಾನೂನು ಸಚಿವ ಎಚ್.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಜಿಲ್ಲಾ ನ್ಯಾಯಾಧೀಶ ಸಚ್ಚಿದಾನಂದ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಯು.ಬಿ. ಬಣಕಾರ ಸೇರಿ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ರಟ್ಟಿಹಳ್ಳಿ ತಾಲೂಕು ಕೇಂದ್ರದಲ್ಲಿ ಹೊಸ ಕೋರ್ಟ್ ಆರಂಭಿಸುವುದರಿಂದ ತಾಲೂಕಿನ ಎಲ್ಲ ಗ್ರಾಮಗಳಿಗೆ ಅನುಕೂಲವಾಗಲಿದೆ. ಈ ಮೊದಲು ಈ ಭಾಗದ ಗ್ರಾಮಸ್ಥರು ಹಿರೇಕೆರೂರು ನ್ಯಾಯಾಲಯಕ್ಕೆ ಬರುತ್ತಿದ್ದರು. ಕೆಲವೊಮ್ಮೆ ಸರಿಯಾಗಿ ಹಳ್ಳಿಗಳಿಗೆ ಬಸ್ ಸಿಗದೇ ಕಕ್ಷಿದಾರರು ರಾತ್ರಿವರೆಗೆ ಅಲ್ಲಿಯೇ ಕಾಲ ಕಳೆದಿರುವುದು ಗಮನಿಸಿದ್ದೇವೆ. ಮನೆ ಬಾಗಲಿಗೆ ನ್ಯಾಯಾಲಯ ಎಂಬಂತೆ ರಟ್ಟಿಹಳ್ಳಿಯಲ್ಲಿ ನ್ಯಾಯಾಲಯ ಆರಂಭಿಸಸುದರಿಂದ ಜನರಿಗೆ ತ್ವರಿತ ನ್ಯಾಯ ಸಹ ದೊರಕಲಿದೆ. | ಬಿ.ಎಚ್. ಬನ್ನಿಕೋಡ ಅಧ್ಯಕ್ಷ ರಟ್ಟಿಹಳ್ಳಿ ತಾಲೂಕು ವಕೀಲರ ಸಂಘ ಹಳೆಯ ತೋಟಗಾರಿಕೆ ಕಟ್ಟಡವನ್ನು 30 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. 10 ಲಕ್ಷ ರೂ.ಗೂ ಹೆಚ್ಚಿನ ಅನುದಾನ ಮಂಜೂರು ಮಾಡಲಾಗಿದೆ. ಡಿ. 15ರಂದು ಕೋರ್ಟ್ ಉದ್ಘಾಟನೆ ಸಮಾರಂಭ ಏರ್ಪಾಟಾಗಿದೆ. ಆರಂಭದಲ್ಲಿ ವಾರದಲ್ಲಿ 3 ದಿನ ನ್ಯಾಯಾಲಯದ ಕಾರ್ಯ-ಕಲಾಪ ನಡೆಯಲಿದೆ. ವಾರದ 7 ದಿನವೂ ಕೋರ್ಟ್ ಕಲಾಪ ನಡೆಸಲು ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮನವಿಗೆ ಸ್ಪಂದಿಸುವ ಭರವಸೆಯನ್ನು ನ್ಯಾಯಾಧೀಶರು ನೀಡಿದ್ದಾರೆ. | ಯು.ಬಿ. ಬಣಕಾರ ಹಿರೇಕೆರೂರು-ರಟ್ಟಿಹಳ್ಳಿ ಶಾಸಕ