

ಮುಧೋಳ (ಅಜಿತಸೇನಾಚಾರ್ಯ ವೇದಿಕೆ)
ಕನ್ನಡ ಕಾವ್ಯ ಪರಂಪರೆಗೆ ರತ್ನತ್ರಯರ ಕೊಡುಗೆ ಅಮೋಘವಾಗಿದೆ ಎಂದು ರಾಜ್ಯಪ್ರಶಸ್ತಿ ಪುರಸ್ಕೃತ ಬಿ.ಆರ್. ಪೊಲೀಸ್ ಪಾಟೀಲ ಹೇಳಿದರು.
ನಗರದ ರನ್ನಭವನದ ಅಜಿತಸೇನಾಚಾಯರ್ಯ ವೇದಿಕೆಯಲ್ಲಿ ಸೋಮವಾರ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವ್ಯವೆಂಬುದು ಪ್ರತಿಭೆಯ ಸಂಪತ್ತು, ಸೃಜನಶೀಲತೆಯ ಆಶಯವಿದ್ದಂತೆ. ಅಂತಹ ಸಂಪತ್ತನ್ನು ವೃದ್ಧಿಸಿಕೊಳ್ಳಲು ನಿರಂತರ ಅಧ್ಯಯನದ ಅವಶ್ಯಕತೆಯಿದೆ. ರನ್ನ ಶಕ್ತಿ ಕವಿಯಾಗಿದ್ದು, ಆತನ ಸಾಹಿತ್ಯ ವಿಮರ್ಶಕರಿಗೆ ಸವಾಲಾಗಿದೆ ಎಂದರು.
ಮರೆಗುದ್ದಿ ಅಡವಿ ಸಿದ್ಧೇಶ್ವರಮಠದ ಡಾ. ನಿರುಪಾದೀಶ್ವರ ಮಹಾಸ್ವಾಮಿಗಳು ಕವಿಗೋಷ್ಠಿ ಉದ್ಘಾಟಿಸಿ ಕಾವ್ಯ ವಾಚನ ಮಾಡಿ, ರನ್ನ ಪ್ರತಿಷ್ಠಾನದಿಂದ ರಚಿತಗೊಂಡಿರುವ ಕಾವ್ಯತೇಜ ಕವನಸಂಕಲನ ಬಿಡುಗಡೆಗೊಳಿಸಿದರು.
ಕವಯಿತ್ರಿ ಡಾ. ಲಲಿತಾ ಹೊಸಪ್ಯಾಟಿ ಮಾತನಾಡಿ, ರನ್ನನ ಕಾವ್ಯದಲ್ಲಿ ಹಲವಾರು ರಸಗಳು ತುಂಬಿಕೊಂಡಿದ್ದರೂ ಕರುಣೆ ಹಾಗೂ ರೌದ್ರ ರಸದ ಮೂಲಕ ಖಳನಾಯಕನನ್ನು ನಾಯಕನನ್ನಾಗಿ ಮಾಡುವ ವಿಶಿಷ್ಟ ಗುಣ ಅವನಲ್ಲಿತ್ತು. ಈ ಕಾರಣಕ್ಕಾಗಿ ಅವನ ಕಾವ್ಯ ಇಂದಿಗೂ ಪ್ರಸ್ತುತ. ಈ ನಿಟ್ಟಿನಲ್ಲಿ ಇಂದಿನ ಕವಿಗಳು ಹೊಸ ಹೊಸ ಕಾವ್ಯಗಳನ್ನು ರಚನೆ ಮಾಡುವುದರಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ರನ್ನ ಪ್ರತಿಷ್ಠಾನದ ಸದಸ್ಯರಾದ ರೂಗಿಯ ನಿತ್ಯಾನಂದ ಶ್ರೀಗಳು, ಕೆ.ಎಲ್. ಉದುಪುಡಿ, ಶಿವಪ್ರಕಾಶ ಸರಗಣಾಚಾರಿ, ಎಸ್.ಕೆ. ಹೊಸಕೋಟಿ, ಸುಲೋಚನಾ ಜವಳಿ, ಕಸಾಪ ಅಧ್ಯಕ್ಷ ಆನಂದ ಪೂಜಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ವಿವೇಕಾನಂದ ಎಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನ, ಪಿ.ವಿ.ಬಳಿಗಾರ ಮತ್ತಿತರರಿದ್ದರು. ಗಂಗಾಧಾರ ಗಾಣಿಗೇರ ನಿರ್ವಹಿಸಿದರು.