ರತ್ನಪುರಿ ಕೃಷಿ ಪತ್ತಿನ ಸಂಘಕ್ಕೆ ಪ್ರಶಸ್ತಿ

HUN-SEP-30-1(RATNAPURI VSSN)
ಹುಣಸೂರು ತಾಲೂಕು ರತ್ನಪುರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಮೇಶ್ ಅವರನ್ನು ಸನ್ಮಾನಿಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಸಂಘದ ಅಧ್ಯಕ್ಷ ನಾಗೇಗೌಡ, ರತ್ನಪುರಿ ಪುಟ್ಟಸ್ವಾಮಿ, ಗಿರಿಸಿಂಧೆ ಸ್ವಾಮಿನಾಥ್ ಇದ್ದರು.
Published on

ಹುಣಸೂರು: ರತ್ನಪುರಿ ಪ್ರಾಥಮಿಕ ಕೃಷಿ ಪತ್ತಿನ ಸಂಘ ತಾಲೂಕಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಎಂಬ ಪ್ರಶಸ್ತಿಗೆ ಭಾಜನವಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಸಂಘದ ಮಾಜಿ ಅಧ್ಯಕ್ಷ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಸಂತಸ ವ್ಯಕ್ತಪಡಿಸಿದರು.


ಸಂಘದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಸಂಘದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ತಂಡ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಪರಿಣಾಮ ಪ್ರಶಸ್ತಿ ಪಡೆದಿದ್ದೇವೆ. ಸಹಕಾರ ಸಂಘಗಳ ಮೂಲಕ ರೈತರು, ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸುವ ಕಾರ್ಯ ಆಗಬೇಕಿದೆ. ನಾನು 1995ರಲ್ಲಿ ಅಧ್ಯಕ್ಷನಾಗಿದ್ದ ವೇಳೆ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನೂ ಗಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಂಘದಿಂದ ಇನ್ನಷ್ಟು ಕ್ರಿಯಾಶೀಲ ಚಟುವಟಿಕೆ ನಡೆಸುವ ಮೂಲಕ ರೈತರ ಧ್ವನಿಯಾಗಿ ದುಡಿಯೋಣ ಎಂದರು.


ಸಂಘದ ಅಧ್ಯಕ್ಷ ನಾಗೇಗೌಡ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಸಂಘವು 45 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ. ಸಂಘದಿಂದ ಆದಾಯ ತರುವ ಉದ್ದೇಶದಿಂದ ವಾಣಿಜ್ಯ ಮಳಿಗೆಗಳನ್ನು ಕಟ್ಟಿಸಲಾಗಿದೆ. ಉಳಿದ ನಿವೇಶನಗಳಲ್ಲೂ ಹೊಸದಾಗಿ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಮೇಶ್ ಲೆಕ್ಕಪತ್ರ ಮಂಡಿಸಿದರು. ಅತ್ಯುತ್ತಮ ಸಂಘದ ಪ್ರಶಸ್ತಿಗೆ ಪಾತ್ರವಾದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭು, ಸಂಘದ ಮಾಜಿ ಅಧ್ಯಕ್ಷರಾದ ಗಿರಿ ಸಿಂಧೆ ಸ್ವಾಮಿನಾಥ್, ಆಲಿಜಾನ್, ಕೃಷ್ಣಕುಮಾರ್, ಸಂಘದ ನಿರ್ದೇಶಕರಾದ ರತ್ನಪುರಿ ಪುಟ್ಟಸ್ವಾಮಿ, ನಂದೀಶ, ದಯಾನಂದ, ವಿ.ಮುಜೀಬ್, ಮೊಹಮ್ಮದ್ ರಫೀಕ್, ಮುರುಳಿ, ವೆಂಕಟೇಶ್, ಚಿಕ್ಕತಿಮ್ಮನಾಯಕ, ಬೇಬಿ ಸರೋಜಿನಿ, ಶಕುಂತಲಾ ಬಾಯಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net