

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನುಷ್ಯನಲ್ಲಿ ಒಂದಿಲ್ಲ ಒಂದು ಪ್ರತಿಭೆ ಇರುತ್ತದೆ. ಜೀವನದ ಅನುಭವದಲ್ಲಿ ಹೊಸದನ್ನು ಕಂಡಾಂಗ ಅದನ್ನು ಮಾತಿನ ಮೂಲಕ ಇಲ್ಲವೇ ಬರವಣಿಗೆಯಿಂದ ಹೊರಹಾಕುವ ಪ್ರಕ್ರಿಯೆ ಇರುತ್ತದೆ. ಬರವಣಿಗೆ ಮೂಲಕ ಹೊರಹಾಕುವ ಕ್ರಿಯೆಯನ್ನೇ ಸಾಹಿತ್ಯ ಎಂದು ಗುರುತಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಶಿವಾನಂದ ಕಟಗಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಯಲ್ಲಪ್ಪ ರಾಮಪ್ಪ ತಂಬೂರ ಸ್ಮರಣಾರ್ಥ ದತ್ತಿ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಹೂವ ತಂದವರು ಪ್ರಶಸ್ತಿ ಪ್ರದಾನ-2024 ಹಾಗೂ ನೆನಪಿನಂಗಳ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇವತ್ತಿನ ಕಾಲ ಘಟ್ಟದಲ್ಲಿ ಸಂಬಂಧಗಳು, ಮಾನವೀಯ ಮೌಲ್ಯಗಳು, ಪರಸ್ಪರ ಅನೋನ್ಯತೆ ಕಡಿಮೆಯಾಗುತ್ತಿರುವುದು ದುರಂತದ ಸಂಗತಿ. ಶ್ರಮವಹಿಸಿ ದುಡಿದ ಹಣ ಕಳೆದುಕೊಂಡಾಗ ನೋವಾಗುವುದು ಸಹಜ. ಸೈಬರ್ ಕ್ರೈ೦ ಮೂಲಕ ಲಕ್ಷಾಂತರ ರೂ. ಹಣ ಕಳೆದುಕೊಳ್ಳುತ್ತಿರುವುದನ್ನು ಕಾಣುತ್ತೇವೆ. ಸುಶಿಕ್ಷಿತರೇ ಮೋಸ ಮಾಡುತ್ತಿರುವುದು ಖೇದದ ಸಂಗತಿ. ಇದರಿಂದ ಜಾಗೃತರಾಗುವುದು ಅಗತ್ಯ ಎಂದರು.
ಮೃತ್ಯುಂಜಯ ಶೆಟ್ಟರ, ದತ್ತಿದಾನಿ ಡಾ. ಯಶೋಧಾ ನಿಂಬಣ್ಣವರ, ಬಸಪ್ಪ ತಂಬೂರ ಮಾತನಾಡಿದರು. ನಿಂಗಣ್ಣ ಕುಂಟಿ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿ ನಗರ ಸಾರಿಗೆ 1ನೇ ಘಟಕದ ನಿರ್ವಾಹಕಿ ರತ್ನಮ್ಮ ಕುನ್ನೂರ ಅವರಿಗೆ ಹೂವ ತಂದವರು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಿ.ಜಿ. ಬಾರ್ಕಿ, ಗಿರೀಶ ಸುಣಗಾರ, ಹನುಮಂತಪ್ಪ ಇಟಗಿ, ರುದ್ರೇಶ ಬಾರಕೇರ, ಶ್ರೀಕಾಂತ ದೇವಗೇರಿ, ಅಣ್ಣಪ್ಪ ಶಿರಸಿ, ಚಂದ್ರಶೇಖರ ರೊಟ್ಟಿಗವಾಡ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು.