ಸಮಗ್ರ ಕೃಷಿಯಲ್ಲಿ ರತ್ನಮ್ಮ ಸಾಧನೆ: ಮಲ್ಕೋನಹಳ್ಳಿಯ ಮಾದರಿ ರೈತ ಮಹಿಳೆ

Ratnamma is a model farmer woman of Malkonahalli mandya
Published on

ಮಾಕವಳ್ಳಿ ಸಿ.ರವಿ ಕೆ.ಆರ್.ಪೇಟೆ
ಕೃಷಿ ರಂಗದಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸುವುದು ಬಹು ಅಪರೂಪ.
ಆದರೆ, ತಾಲೂಕಿನ ಶೀಳನೆರೆ ಹೋಬಳಿ ಮಲ್ಕೋನಹಳ್ಳಿ ಗ್ರಾಮದ ರತ್ನಮ್ಮ ಜೀವನ ನಿರ್ವಹಣೆಗಾಗಿ ವ್ಯವಸಾಯವನ್ನೇ ನಂಬಿದವರು. ಶ್ರಮದಿಂದ ಸಾವಯವ ಸಮಗ್ರ ಕೃಷಿಯಿಂದ ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಅವರು ಕೃಷಿಕ ಸಮುದಾಯದಲ್ಲೇ ವಿಶೇಷ ಸಾಧಕಿಯಾಗಿದ್ದಾರೆ.
ರತ್ನಮ್ಮ ಅವರಿಗೆ 2.20 ಎಕರೆ ಜಮೀನು ಇದೆ. ಇದರಲ್ಲೇ ತೋಟಗಾರಿಕೆ, ಅರಣ್ಯ ಕೃಷಿ, ಹೈನುಗಾರಿಕೆ, ಜೇನು ಸಾಕಣೆ, ಹೀಗೆ ಸಮಗ್ರ ಕೃಷಿ ಮಾಡಿ ಪ್ರಗತಿ ಸಾಧಿಸಿದ್ದಾರೆ. ಪತಿ ಕೃಷ್ಣೇಗೌಡ ಕೃಷಿ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ನಾಲ್ಕು ಹೆಣ್ಣು ಮಕ್ಕಳ ವಿವಾಹವಾಗಿದ್ದು, ಪತಿ, ಪತ್ನಿ ವ್ಯವಸಾಯಕ್ಕೆ ಪೂರ್ಣ ಅವಧಿ ಮೀಸಲಾಗಿಟ್ಟಿದ್ದಾರೆ.
ಜಮೀನಿನಲ್ಲಿ ಭತ್ತ, ರಾಗಿ, ಅಲಸಂದೆ, ಹೆಸರು, ಉದ್ದು, ಎಳ್ಳು, ಸಿರಿಧಾನ್ಯಗಳಾದ ನವಣೆ, ಬರಗು, ಸಾಮೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತೋಟಗಾರಿಕೆ ಬೆಳೆಗಳಾದ ತೆಂಗು, ಅಡಕೆ, ಬಾಳೆ, ಪಪ್ಪಾಯ, ಸೀಬೆ, ಹಲಸು, ಏಲಕ್ಕಿ, ಶುಂಠಿ, ಬದನೆ, ಈರುಳ್ಳಿ, ಬೆಳ್ಳುಳ್ಳಿ ಕೃಷಿ ಇವರಿಗೆ ಒಲಿದಿದೆ. ಪುಷ್ಪ ಕೃಷಿಯಲ್ಲೂ ರತ್ನಮ್ಮ ಎತ್ತಿದ ಕೈ. ಕನಕಾಂಬರ ಹೂ, ಸೇವಂತಿಗೆ ಹೂಗಳನ್ನು ಅವರು ಸಮೃದ್ಧವಾಗಿ ಬೆಳೆಯುತ್ತಿದ್ದಾರೆ. ಅರಣ್ಯ ಮರಗಳಾದ ತೇಗ, ಸಿಲ್ವರ್, ಹೆಬ್ಬೇವು ಮರಗಳನ್ನು ತಮ್ಮ ಜಮೀನಿನ ಸುತ್ತ ಬದುಗಳಲ್ಲಿ ಹಾಕಿದ್ದಾರೆ. ಪಶುಗಳಿಗೆ ಮೇವಿನ ಬೆಳೆಗಳನ್ನು ಸಹ ಬೆಳೆದಿದ್ದಾರೆ.
ಸುಮಾರು ಒಂದುವರೆ ಎಕರೆಯಲ್ಲಿ ರತ್ನಮ್ಮ ಭತ್ತ, ರಾಗಿ ಬೆಳೆಯುತ್ತಿದ್ದಾರೆ. ಇದರಿಂದ ವಾರ್ಷಿಕ 60,000 ರೂ., ಪೂರ್ವ ಮುಂಗಾರಿನಲ್ಲಿ ಅಲಸಂದೆ, ಹೆಸರು, ಉದ್ದು ಬೆಳೆಗಳಿಂದ 20,000 ರೂ. ಆದಾಯ ಪಡೆಯುತ್ತಿದ್ದಾರೆ. ಕೃಷಿ ಇಲಾಖೆ ವತಿಯಿಂದ ಕೃಷಿಹೊಂಡ, ಎರೆಹುಳು ತೊಟ್ಟಿಯನ್ನು ಇವರಿಗೆ ನಿರ್ಮಿಸಿ ಕೊಟ್ಟು ವ್ಯವಸಾಯಕ್ಕೆ ಬೆಂಬಲ, ಉತ್ತೇಜನ ನೀಡಲಾಗಿದೆ.
ತೋಟಗಾರಿಕೆ ಬೆಳೆಗಳಾದ ತೆಂಗು ಬೆಳೆಯಿಂದ ಎಳೆನೀರು ಮತ್ತು ತೆಂಗಿನಕಾಯಿ ಫಸಲು ಪಡೆಯುತ್ತಿದ್ದಾರೆ. ಇದರಿಂದ ಸುಮಾರು 1.20 ಲಕ್ಷ ರೂ. ವಾರ್ಷಿಕ ಆದಾಯ ಬರುತ್ತಿದೆ. ಸೇವಂತಿಗೆ ಹೂವಿನಿಂದ 60,000 ರೂ. ವಾರ್ಷಿಕ ಆದಾಯ ಸಿಗುತ್ತಿದೆ. ಇರುವ ಚಿಕ್ಕ ಜಮೀನಿನಲ್ಲೇ ಕಡಿಮೆ ವೆಚ್ಚದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವುದು ಬಹಳ ವಿಶೇಷ.
ಎರೆಹುಳು ಗೊಬ್ಬರ ತಯಾರಿಕೆ: ರತ್ನಮ್ಮ ಸುಮಾರು ಎಂಟು ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಸಿಗುವ ಕೃಷಿ ತ್ಯಾಜ್ಯಗಳನ್ನು ಬಳಸಿಕೊಂಡು, ಎರೆಹುಳು ಗೊಬ್ಬರ ತಯಾರಿಸಿ ಬೆಳೆಗೆ ಬಳಸುತ್ತಿದ್ದಾರೆ. ಇತರರಿಗೂ ಮಾರಾಟ ಮಾಡುತ್ತಿದ್ದಾರೆ.

ಹೊಸ ವಿಧಾನ ಅಳವಡಿಕೆ: ರತ್ನಮ್ಮ ಅವರು ಟಿವಿ/ರೇಡಿಯೋದಲ್ಲಿ ಪ್ರಸಾರವಾಗುವ ಕೃಷಿ ಆಧಾರಿತ ಕಾರ್ಯಕ್ರಮಗಳನ್ನು ಕೇಳಿ ಹೊಸ ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಂಡಿದ್ದಾರೆ. ಕೃಷಿ ಇಲಾಖೆಗೆ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು ನೂತನ ವಿಧಾನಗಳನ್ನು ತಿಳಿದು, ಇಲಾಖೆಯಿಂದ ದೊರೆಯುವ ಸವಲತ್ತು ಪಡೆದು ಪ್ರಗತಿಪರ ರೈತ ಮಹಿಳೆಯಾಗಿದ್ದಾರೆ. ಇವರ ತೋಟಕ್ಕೆ ರೈತರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಆಕಾಶವಾಣಿಯಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ.
ಪ್ರಶಸ್ತಿ, ಪುರಸ್ಕಾರ: ಸಾಧಕಿ ರತ್ನಮ್ಮ ಅವರಿಗೆ 2017-18ನೇ ಸಾಲಿನಲ್ಲಿ ಕೃಷಿ ಇಲಾಖೆ ಆತ್ಮ ಯೋಜನೆಯಿಂದ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, 2019-20ನೇ ಸಾಲಿನ ಕೃಷಿ ವಿಶ್ವವಿದ್ಯಾನಿಲಯದ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ ಹಾಗೂ 2022ರಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಮಾದರಿ ಕೃಷಿ ಮಹಿಳೆ ಪ್ರಶಸ್ತಿ ಅರಸಿ ಬಂದಿದೆ. ಕಡಿಮೆ ಜಮೀನನ್ನು ಹೊಂದಿದ್ದರೂ ಕಾಲಕ್ಕೆ ತಕ್ಕಂತೆ ಹೊಸ ಹೊಸ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಅಧಿಕ ಇಳುವರಿ ಪಡೆಯುವ ಮೂಲಕ ಪ್ರಗತಿ ಸಾಧಿಸಿರುವುದು ಮಹತ್ವದ ಸಂಗತಿ. ಬಹು ಬೆಳೆಗಳನ್ನು ಬೆಳೆದು ಸಮಗ್ರ ಕೃಷಿ ಮಾಡುತ್ತಾ ಮಾದರಿ ರೈತ ಮಹಿಳೆಯಾಗಿದ್ದಾರೆ.
ಹೈನುಗಾರಿಕೆಯಲ್ಲೂ ಸಾಧನೆ: ರತ್ನಮ್ಮ ಅವರು ಕೃಷಿಯೊಂದಿಗೆ ಹಸು, ಕುರಿ, ಮೇಕೆಗಳನ್ನು ಸಾಕುವಲ್ಲಿ ಆಸಕ್ತಿ ಹೊಂದಿದ್ದಾರೆ. ನಾಲ್ಕು ಹಸುಗಳನ್ನು ಸಾಕಿದ್ದಾರೆ. ಪ್ರತಿದಿನ 20 ಲೀ. ಹಾಲು ಮಾರಾಟ ಮಾಡುತ್ತಿದ್ದಾರೆ. ಉಳುಮೆ ಹಸು ಬಳಸಿ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದಾರೆ. ಪ್ರಶಸ್ತಿ ಜತೆ ನೀಡಿದ್ದ ನಗದು ಬಹುಮಾನದಲ್ಲಿ ಮೇಕೆ ಖರೀದಿಸಿದ್ದಾರೆ. ಸದ್ಯ ಇವರಲ್ಲಿ 15 ಮೇಕೆಗಳಿವೆ. ಈಗಾಗಲೇ ಹಲವು ಮೇಕೆಗಳನ್ನು ಮಾರಾಟ ಮಾಡಿ ಆದಾಯ ಗಳಿಸಿದ್ದಾರೆ.
ಹೆಬ್ಬೇವು ಮರವನ್ನು ಮಾರಾಟ ಮಾಡಿದ್ದು ಲಾಭ ತಂದುಕೊಟ್ಟಿದೆ. ಜಮೀನಿನ ಗಡಿ ಭಾಗದಲ್ಲಿ ಅರಣ್ಯ ಕೃಷಿ ಯೋಜನೆಯಡಿ ತೇಗದ ಮರಗಳನ್ನು ಬೆಳೆದಿದ್ದಾರೆ. ಈಗ ಅದಕ್ಕೆ 8 ವರ್ಷ ಆಗಿದ್ದು, ಇನ್ನು ಮೂರ‌್ನಾಲ್ಕು ವರ್ಷದಲ್ಲಿ ಕಟಾವಿಗೆ ಬರಲಿದೆ. ಆಗ ಉತ್ತಮ ಆದಾಯದ ಬರಲಿದೆ ಎನ್ನುತ್ತಾರೆ ರತ್ನಮ್ಮ. ಜೀವಾಮೃತ ತಯಾರಿಸಿ ಬಯೋಡೈಜೆಸ್ಟರ್ ಮೂಲಕ ಬೆಳೆಗಳಿಗೆ ನೀಡುತ್ತಿದ್ದಾರೆ. ಗಿಡ ಅಥವಾ ಫಸಲಿಗೆ ಕೀಟ, ರೋಗ ಬಂದಲ್ಲಿ ಸಾವಯವ ಔಷಧಗಳನ್ನೇ ಸಿಂಪಡಿಸುತ್ತಿದ್ದಾರೆ.
ಜಮೀನಿನಲ್ಲಿ ಉಪ್ಪಿನಕಾಯಿ ಶುಂಠಿ ಬೆಳೆಯಲಾಗಿದ್ದು ಕಟಾವಿಗೆ ಬಂದಿದೆ. ಸುಮಾರು 10 ಕ್ವಿಂಟಾಲ್ ಇಳುವರಿ ಅಂದಾಜಿಸಲಾಗಿದೆ. ಇದಕ್ಕೆ ಸಾಮಾನ್ಯ ಶುಂಠಿಗಿಂತ ಹೆಚ್ಚಿನ ಬೆಲೆಯಿದೆ. ಇದರೊಂದಿಗೆ 150 ಕ್ವಿಂಟಾಲ್ ಸಾಮಾನ್ಯ ಶುಂಠಿ ಬೆಳೆದಿದ್ದಾರೆ. ಎರಡು ಜೇನು ಪೆಟ್ಟಿಗೆಯನ್ನು ತೋಟದಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ. ಜೇನುತುಪ್ಪವನ್ನು ಮನೆಗೆ ಬಳಸಿಕೊಂಡು ಸ್ಥಳೀಯವಾಗಿಯೂ ಮಾರಾಟ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net