

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ನಿಮಿತ್ತ ನೀಡುವ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನವನ್ನು ಪ್ರಕಟಿಸಲಾಗಿದೆ.
2023ನೇ ಸಾಲಿನ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಬೆಳಗಾವಿಯ ಶ್ವೇತಾ ನರಗುಂದ ಅವರ ಆಯಾಮ (ಕಥಾ ಸಂಕಲನ), ಬೆಂಗಳೂರಿನ ವಿದ್ಯಾರಶ್ಮಿ ಪೆಲತ್ತಡ್ಕ ಅವರ ಕೆರೆ ದಡ (ಕವನ ಸಂಕಲನ) ಹಾಗೂ ಉಡುಪಿಯ ಪೂರ್ಣಿಮಾ ಸುರೇಶ ಅವರ ರಂಗ ರಂಗೋಲಿ (ಅಂಕಣ ಬರಹಗಳ ಸಂಕಲನ) ಕೃತಿಗಳು ಆಯ್ಕೆಯಾಗಿವೆ.
ಆಯ್ಕೆಗಾಗಿ ಬಂದ ಲೇಖಕಿಯರ ವಿವಿಧ ಸಾಹಿತ್ಯ ಪ್ರಕಾರಗಳ 79 ಕೃತಿಗಳಲ್ಲಿ ಕಥೆ/ಕಾದಂಬರಿ, ಕವನ ಸಂಕಲನ ಹಾಗೂ ಇತರೆ ಪ್ರಕಾರಗಳು ಹೀಗೆ ಮೂರು ವಿಭಾಗದಲ್ಲಿ ಒಂದೊಂದು ಶ್ರೇಷ್ಠ ಕನ್ನಡ ಕೃತಿಗಳನ್ನು ನಿರ್ಣಾಯಕರ ಸಮಿತಿ ಆಯ್ಕೆ ಮಾಡಿದೆ. ಪ್ರತಿ ಬಹುಮಾನಿತ ಕೃತಿಗೆ 15,000 ರೂ. ನಗದು ಬಹುಮಾನ, ಪ್ರಶಸ್ತಿ ಫಲಕ ನೀಡಿ ಲೇಖಕಿಯರನ್ನು ಸನ್ಮಾನಿಸಲಾಗುವುದು. ಪ್ರಸಕ್ತ ಬಹುಮಾನಗಳನ್ನು ಮಾರ್ಚ್ ಮೊದಲ ವಾರದಲ್ಲಿ ಸಂಘದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿದೆ.