

ಮೈಸೂರು: ಮಕ್ಕಳಿಗೆ ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಅವರಲ್ಲಿ ವೈಚಾರಿಕತೆ ಹುಟ್ಟು ಹಾಕುವುದು ಅಷ್ಟೇ ಮುಖ್ಯ. ಮಕ್ಕಳ ಮನಸ್ಸು ಅತ್ಯಂತ ಮುಗ್ದತೆಯಿಂದ ಕೂಡಿರುವುದರಿಂದ ನಾವು ಏನನ್ನು ಬಿತ್ತಿದರೂ ಅದು ಅವರ ಮನಸ್ಸಿನಲ್ಲಿ ಮೊಳಕೆಯೊಡೆಯುತ್ತದೆ ಎಂದು ಧ್ವನಿ ಫೌಂಡೇಷನ್ ಸಂಸ್ಥಾಪಕಿ ಡಾ. ಶ್ವೇತಾ ಮಡಪ್ಪಾಡಿ ಹೇಳಿದರು.
ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಮಾನಸ ಸರೋವರ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಭವಿಷ್ಯದಲ್ಲಿ ಉತ್ತಮ ಪ್ರಜೆಯನ್ನಾಗಿಸಲು ಪ್ರತಿ ಮಗುವಿನಲ್ಲೂ ವೈಚಾರಿಕ ಪ್ರಜ್ಞೆಯನ್ನು ಹುಟ್ಟು ಹಾಕುವುದು ಅವಶ್ಯಕ. ಮಕ್ಕಳು ಈ ನೆಲದ ಚೈತನ್ಯದ ಸಂಕೇತ. ಲವಲವಿಕೆಯಿಂದ ಕೂಡಿರುವ ಮಕ್ಕಳಿಗೆ ಇರುವ ದೊಡ್ಡ ಅಪಾಯವೆಂದರೆ ಅದು ಮೊಬೈಲ್. ಏಕಾಗ್ರತೆಯನ್ನು ಸರ್ವನಾಶ ಮಾಡುವ ಭಯಾನಕ ವಸ್ತುವೆಂದರೆ ಅದು ಮೊಬೈಲ್. ಮಕ್ಕಳನ್ನು ಮೊಬೈಲ್ನಿಂದ ದೂರವಾಗಿಸುವ ನಿರಂತರ ಸವಾಲನ್ನು ಪಾಲಕರು ಎದುರಿಸುತ್ತಿದ್ದಾರೆ ಎಂದರು.
ಸಂಗೀತ ನೃತ್ಯ ಕ್ರೀಡೆ ಮೊದಲಾದ ಪಠ್ಯೇತರ ವಿಷಯಗಳು ಮಕ್ಕಳನ್ನು ಸರಿದಾರಿಯಲ್ಲಿ ನಡೆಸಲು ಪೂರಕ ವಿಷಯಗಳಾಗಬಲ್ಲವು. ಸಂಗೀತ, ನೃತ್ಯದಂತ ಪ್ರಕಾರಗಳನ್ನು ಅಧ್ಯಯನದ ವಿಷಯಗಳನ್ನಾಗಿ ಸ್ವೀಕರಿಸಿದರೆ ಸಾಮಾಜಿಕ ಗೌರವದ ಜತೆಗೆ ಆರ್ಥಿಕ ಸ್ವಾವಲಂಬ ನೆಗೂ ದಾರಿ ಸಿಗಬಲ್ಲದು. ಬದುಕಿನ ಕೊನೆಯ ಕಾಲದವರೆಗೂ ಸಂಗೀತದಂತಹ ವಿದ್ಯೆಯನ್ನು ಕಲಿತವರು ಸ್ವಾವಲಂಬನೆಯಿಂದ ಬದುಕುವುದಕ್ಕೆ ಆರ್ಥಿಕ ಚೈತನ್ಯವನ್ನು ಸಂಗೀತ ಕೊಡಬಲ್ಲದು. ಹೀಗಾಗಿ ಸಂಗೀತ ನೃತ್ಯಗಳಂಥ ಸಾಂಸ್ಕೃತಿಕ ವಿಷಯಗಳು ಕೇವಲ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದಕ್ಕೆ ಮಾತ್ರವಲ್ಲದೆ ನಮ್ಮ ವೈಯಕ್ತಿಕ ಏಳಿಗೆಗೂ ದಾರಿಗಳಾಗಬಲ್ಲವು ಎಂದರು.
ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಸೌಮ್ಯ ಇದ್ದರು.
* ಸದೇಶ್ -2
ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಮಾನಸ ಸರೋವರ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಧ್ವನಿ ಫೌಂಡೇಷನ್ ಸಂಸ್ಥಾಪಕಿ ಡಾ. ಶ್ವೇತಾ ಮಡಪ್ಪಾಡಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಸೌಮ್ಯ ಇದ್ದರು.
-----------------