

ಉಡುಪಿ : ಕೇಂದ್ರ ಸರ್ಕಾರ ದೇಶದ 84 ಕೋಟಿ ಜನರಿಗೆ ಪಡಿತರದಾರರಿಗೆ ಅಕ್ಕಿಯನ್ನು ನೀಡುತ್ತಿದೆ. ಕೆಜಿಗೆ 36 ರುಪಾಯಿಗೆ ಖರೀದಿಸಿ 3 ರೂ. ಕೊಡುತ್ತಿದೆ. ಸಿದ್ದರಾಮಯ್ಯ ಸ್ವಂತ ಕಿಸೆಯಿಂದ ಅನ್ನ ಭಾಗ್ಯಕ್ಕೆ ಹಣ ಕೊಟ್ಟಿಲ್ಲ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ವರ್ಷಕ್ಕೆ 1 ಲಕ್ಷ 60 ಸಾವಿರ ಕೋಟಿ ರೂ. ಪಡಿತರಕ್ಕಾಗಿ ಖರ್ಚು ಮಾಡುತ್ತದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 1,84,000 ಕೋಟಿ ರೂ. ಮೊತ್ತದ ಬೇಳೆ ಹಾಗೂ ಗೋಧಿ ನೀಡಲಾಗುತ್ತಿದೆ. ಈ ಬಾರಿ ಜನಕ್ಕೆ ಮೋಸ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾದಾಗ ಜಾತಿ ವಾದ ಮಾಡಿ ಲಿಂಗಾಯಿತ ಧರ್ಮ ಒಡೆಯಲು ಪ್ರಯತ್ನಿಸಿದರು. ಎಲ್ಲೂ ಹೆಸರಿಲ್ಲದ ಟಿಪ್ಪು ಹೆಸರು ಜಾರಿಗೆ ತಂದಿದ್ದು ಸಿದ್ದರಾಮಯ್ಯ. ಮುಸಲ್ಮಾನರಿಗೆ 10000 ಕೋಟಿ ರೂಪಾಯಿ ಹೆಚ್ಚುವರಿ ಕಾಯ್ದಿರಿಸುವುದಾಗಿ ಘೋಷಣೆ ಮಾಡಿದ್ದಾರೆ. ನ್ಯಾಯಯುತವಾಗಿ ಎಲ್ಲಾ ಜಾತಿಯ ಬಡವರಿಗೆ ಸರ್ಕಾರದ ಹಣ ಸಲ್ಲಬೇಕು. ಒಂದು ಧರ್ಮಕ್ಕೆ ಹಣ ಘೋಷಣೆ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಮತ್ತೊಮ್ಮೆ ಕೋವಿಡ್ ಬಂದಿದೆ. ಭಾರತಕ್ಕೂ ಚೀನಾದಿಂದ ಪ್ರವಾಸಿಗರು ಬರುತ್ತಿದ್ದಾರೆ. ಭಾರತದ ನಾಲ್ಕೈದು ಮಂದಿಯಲ್ಲಿ ಈಗಾಗಲೇ ರೂಪಾಂತರ ವೈರಸ್ ಪತ್ತೆಯಾಗಿದೆ. ನಿಯಮ ಕಟ್ಟನಿಟ್ಟು ಪಾಲಿಸುವಂತೆ ಸರ್ಕಾರ ಹೇಳಿದೆ. ದೇಶದಲ್ಲಿ ಆತಂಕ ಪಡುವ ವಿಚಾರ ಇಲ್ಲ. ಜಾಗೃತರಾಗಿರಬೇಕು, ಮಾಸ್ಕ್ ಧರಿಸಬೇಕು, ನಮ್ಮ ವ್ಯಾಕ್ಸಿನ್ ದೇಶವನ್ನು ರಕ್ಷಿಸಿದೆ. ಎಲ್ಲ ಭಾರತೀಯರಿಗೂ ಉಚಿತ ವ್ಯಾಕ್ಸೀನ್ ಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡಿತ್ತು. ಈಗ ಎಲ್ಲರೂ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು. ಮಾಸ್ಕ್ ಮತ್ತು ವ್ಯಾಕ್ಸೀನ್ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಇರುವ ಪರಿಹಾರ. ನಮ್ಮ ದೇಶದಲ್ಲಿ ಕೊಟ್ಟ ವ್ಯಾಕ್ಸಿನ್ ಎಲ್ಲಾ ವೈರಸ್ಸನ್ನ ತಡೆಗಟ್ಟುವ ವಿಶ್ವಾಸವಿದೆ. ಕೋವಿಡ್ ಎರಡು ಮತ್ತು ಮೂರನೇ ಅಲೆಯಲ್ಲಿ ಆತಂಕದಿಂದ ಹೆಚ್ಚು ಜನ ಸತ್ತಿದ್ದರು. ಡಯಾಬಿಟಿಸ್ ಹಾರ್ಟ್ ಕಿಡ್ನಿ ಸಮಸ್ಯೆ ಉಳ್ಳವರು ಹೆಚ್ಚು ಸತ್ತಿದ್ದರು. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚಿನ ಜಾಗೃತ ವಹಿಸಬೇಕು ಎಂದರು.
ಭಾರತ ಜೋಡೋ ಯಾತ್ರೆ ತಡೆಗಟ್ಟುವ ಕೆಲಸ ಯಾರು ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಕೂಡ ಕಾಂಗ್ರೆಸಿಗೆ ಎಲ್ಲಾ ರೀತಿಯ ರಕ್ಷಣೆ ನೀಡಲಾಗಿತ್ತು. ದಸರಾ ಸಂದರ್ಭದಲ್ಲಿ ಮೈಸೂರಿಗೆ ಯಾತ್ರೆ ಬಂದರೂ ಯಾವುದೇ ಅಡ್ಡಿಯಾಗಲಿಲ್ಲ. ಭಾರತ ಜೋಡೋ ಯಾತ್ರೆ ಬಗ್ಗೆ ಕಾಂಗ್ರೆಸ್ಸಿಗೆ ಸಂಶಯವಿದೆ. ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಇಮೇಜ್ ಎಷ್ಟು ಬದಲಾಗಿದೆ ಎಂಬ ಬಗ್ಗೆ ರಾಹುಲ್ ಗಾಂಧಿಗೆ ಸಂಶಯವಿರಬಹುದು. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಆತಂಕದಲ್ಲಿದ್ದಾರೆ. ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಹಿಮಾಚಲ ಪ್ರದೇಶ ಸಿಎಂ ಗೆ ಕೋವಿಡ್ ಪಾಸಿಟಿವ್ ಬಂದಿತ್ತು. ದೇಶದ ಹಿತದೃಷ್ಟದಿಂದ ಕಾಂಗ್ರೆಸ್ ಜಾಗೃತಿ ವಹಿಸಬೇಕು. ಕಾಂಗ್ರೆಸ್ ಪಕ್ಷದ ನಾಯಕರಿಗೆ ನಾವ್ಯಾರು ಬುದ್ಧಿ ಹೇಳುವ ಸ್ಥಿತಿಯಲ್ಲಿ ಇಲ್ಲ ಎಂದರು.