ಪಡಿತರ ವಿತರಣೆಗೆ ಕಂಠಕವಾಗಿರುವ ಸರ್ವರ್ ಸಮಸ್ಯೆ ಬಗೆಹರಿಸಿ

IMG-20241022-WA0099
ಸರ್ವರ್ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಪಡಿತರ ವಿತರಕರ ಸಂಘದ ಸದಸ್ಯರು ಪಾಲಾಕ್ಷ ಅವರಿಗೆ ಮನವಿ ಸಲ್ಲಿಸಿದರು. ವೇದಮೂರ್ತಿ, ಶಿವರಾಜ್, ಜಯಣ್ಣ, ಉಮೇಶ್, ಷಡಕ್ಷರಿ, ರಾಮಸ್ವಾಮಿ ಇತರರಿದ್ದರು.
Published on

ಅರಸೀಕೆರೆ: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಎದುರಾಗಿದ್ದು ಲೋಪ ಸರಿಪಡಿಸುಂತೆ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ವೇದಮೂರ್ತಿ ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳೊಂದಿಗೆ ಮಂಗಳವಾರ ತಾಲೂಕು ಕಚೇರಿಗೆ ತೆರಳಿ ಗ್ರೇಡ್-2 ತಹಸೀಲ್ದಾರ್‌ಪಾಲಾಕ್ಷ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಅಂತರ್ಜಾಲ ಕಿರಿಕಿರಿಯಿಂದಾಗಿ ಗ್ರಾಹಕರಿಂದ ಬೆರಳಚ್ಚು ಪಡೆಯಲು ನಿತ್ಯವೂ ಸರ್ಕಸ್ ಮಾಡುವಂತಾಗಿದೆ. ಇದರಿಂದಾಗಿ ತಾಲೂಕಿನಾದ್ಯಂತ ಬಿಪಿಎಲ್ ಕಾರ್ಡುದಾರು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ಮಧ್ಯೆ ಸಂಘರ್ಷ ಉಂಟಾಗುತ್ತಿದೆ. ತಕ್ಷಣವೇ ಸಮಸ್ಯೆಯನ್ನು ಬಗೆಹರಿಸಬೇಕು. ಸರ್ವರ್ ಸಮಸ್ಯೆ ತಲೆದೋರಿರುವರಿಂದ ಪಡಿತರ ವಿತರಣೆ ಪ್ರಮಾಣ ಕಡಿಮೆಯಾಗಿದೆ. ತಿಂಗಳಾಂತ್ಯ ಹತ್ತಿರವಾಗಿದ್ದು ಶೀಘ್ರವೇ ಹಬ್ಬದ ದಿನಗಳಿದ್ದು ಕಾರ್ಡ್‌ದಾರರು ಪಡಿತರ ವಸ್ತುಗಳು ಸಿಗುತ್ತವೆಯೋ ಇಲ್ಲವೋ ಎಂದು ಗೊಂದಲದಿಂದ ಪದೇ ಪದೆ ನ್ಯಾಯಬೆಲೆ ಅಂಗಡಿಗಳ ಮುಂದೆ ಜಮಾಯಿಸುತ್ತಿದ್ದಾರೆ. ಸದ್ಯದ ಬೆಳವಣಿಗೆ ಸಂಘರ್ಷ ಉಂಟುಮಾಡಿದೆ. ಹೀಗಾಗಿ ಸರ್ಕಾರ ಕೂಡಲೇ ಸರ್ವರ್ ಸಮಸ್ಯೆ ಬಗೆಹರಿಯುವವರೆಗೂ ಸರಳ ಪಡಿತರ ವಿತರಣೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಉಪಾಧ್ಯಕ್ಷ ಚನ್ನಾಪುರ ಶಿವರಾಜ್, ಕಾರ್ಯದರ್ಶಿ, ರಾಮಸ್ವಾಮಿ ಖಜಾಂಚಿ ಬಿ.ಜಯಣ್ಣ, ಕಾಟೀಕೆರೆ ಸುರೇಶ್, ಸಂಕೋಡನಹಳ್ಳಿ ಷಡಕ್ಷರಿ, ಲೋಕೇಶ್, ಇಂದ್ರೇಶ್, ಬಾಣಾವರ ಉಮೇಶ್ ಸೇರಿದಂತೆ ನಿರ್ದೇಶಕರು, ತಾಲೂಕಿನ ಪಡಿತರ ವಿತರಕರು ಉಪಸ್ಥಿತರಿದ್ದರು. ಸಮಸ್ಯೆ ಗಂಭೀರತೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಪಾಲಾಕ್ಷ ಅವರು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net