46,200 ರೂ.ಮೌಲ್ಯದ ಪಡಿತರ ಅಕ್ಕಿ ಜಪ್ತಿ

Rice 14 Mrch 20
Published on

ಪಡುಬಿದ್ರಿ: ಮನೆ ಮನೆಗಳಿಂದ ಪಡಿತರ ಅಕ್ಕಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ವಾಹನವನ್ನು ಕಾಪು ಠಾಣೆ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. ವಾಹನದಿಂದ 46,200 ರೂಪಾಯಿ ಮೌಲ್ಯದ 77 ಚೀಲ ಅಕ್ಕಿಯನ್ನು ಜಪ್ತಿ ಮಾಡಿ ಕಾಪು ತೆಂಕುಪೇಟೆ ಶ್ರೀಕಾಂತ ಭಟ್ (52) ಹಾಗೂ ಪೊಲಿಪುಗುಡ್ಡೆ ಶಂಕರ ಪೂಜಾರಿ (55) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಾಪು ತಾಲೂಕು ಪ್ರಭಾರ ಆಹಾರ ನಿರೀಕ್ಷಕಿ ಮೌನ ಕೆ. ಅವರಿಗೆ ಬಂದ ಮಾಹಿತಿಯಂತೆ ಕಾಪು ಪೊಲೀಸರು ಮಹಾಬಲ ಮಾಲ್ ಕಟ್ಟಡದ ಬಳಿ ಉಡುಪಿಯಿಂದ ಬರುತ್ತಿದ್ದ 407 ಟೆಂಪೋ ಗೂಡ್ಸ್ ವಾಹನ ತಡೆದು ನಿಲ್ಲಿಸಿದಾಗ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಅವರನ್ನು ವಾಹನದಲ್ಲಿ ಬೆನ್ನಟ್ಟಿ ಹಿಡಿದ ಪೊಲೀಸರು ಗೂಡ್ಸ್ ವಾಹನ ಪರಿಶೀಲಿಸಿದಾಗ ಅಕ್ಕಿ ಚೀಲಗಳು ಇರುವುದು ಗೊತ್ತಾಗಿದೆ.

ಆರೋಪಿಗಳು ಮನೆ ಮನೆಗೆ ಹೋಗಿ ಸರ್ಕಾರದಿಂದ ಉಚಿತವಾಗಿ ದೊರೆಯುವ ಅಕ್ಕಿ ಖರೀದಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ಒಪ್ಪಿದ್ದಾರೆ. 50 ಕೆಜಿ ತೂಕದ 77 ಚೀಲ ಅಕ್ಕಿ ಸಹಿತ 7 ಲಕ್ಷ ರೂಪಾಯಿ ಮೌಲ್ಯದ ವಾಹನವನ್ನು ಪೊಲೀಸರು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ವಶಪಡಿಸಿಕೊಂಡ ಅಕ್ಕಿಯನ್ನು ಉಡುಪಿ ಟಿಎಪಿಸಿಎಂಎಸ್ ಅವರಿಗೆ ಹಸ್ತಾಂತರಿಸಲು ಹಾಗೂ ಮುಂದಿನ ಆದೇಶದವರೆಗೆ ವಾಹನವನ್ನು ಕಾಯ್ದಿರಿಸಿ ಕ್ರಮಕೈಗೊಳ್ಳಲು ಆಹಾರ ನಿರೀಕ್ಷಕರು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net