

ಮಂಡ್ಯ: ದೇಶದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡುತ್ತಿರುವ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ.16ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದರು.
ಸ್ವಾತಂತ್ರೃ ಬಂದಾಗಿಂದಲೂ ಇಡೀ ದೇಶದ ನ್ಯಾಯಬೆಲೆ ಅಂಗಡಿ ಮಾಲೀಕರು, ಪಡಿತರ ವಿತರಣೆ ಹಾಗೂ ಸರ್ಕಾರದ ಯೋಜನೆಯನ್ನು ದೇಶಾದ್ಯಂತ ಜನರಿಗೆ ಸುಸೂತ್ರವಾಗಿ ತಲುಪಿಸುವ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದು, ಪಾಸ್‌ಮಿಷನ್ ಪ್ರಿಂಟರ್ ಮೂಲಕ ರಶೀದಿ ವಿತರಿಸುವಂತೆ ಒತ್ತಾಯಿಸುತ್ತಿದೆ. ಈ ಆದೇಶವನ್ನು ಹಿಂಪಡೆಯಬೇಕೆಂದು ಸೋಮವಾರ ಆಗ್ರಹಿಸಿದರು.
ದೇಶಾದ್ಯಂತ ಒಂದು ಯೂನಿಟ್‌ಗೆ 5 ಕೆ.ಜಿ ಆಹಾರ ಪದಾರ್ಥ ವಿತರಿಸಲು ಆದೇಶ ಮಾಡಲಾಗಿದೆ. ಆದರೆ ಅದೇ ರೀತಿ ಕಮಿಷನ್ ನೀಡುವುದನ್ನು ಏಕರೂಪಗೊಳಿಸಬೇಕು. ಪ್ರಸ್ತುತ ಬೇರೆ ರಾಜ್ಯಗಳಲ್ಲಿ ಹೆಚ್ಚು ಕಮಿಷನ್ ನೀಡುವ ಪದ್ದತಿ ಜಾರಿಯಲಿದೆ. ಆದ್ದರಿಂದ ಏಕರೂಪದ ಕಮಿಷನ್‌ನಂತೆ ದೇಶಾದ್ಯಂತ ಕ್ವಿಂಟಾಲ್‌ಗೆ 300 ರೂಗಳಂತೆ ನೀಡಲು ಆದೇಶಿಸಬೇಕು. ಸಾರ್ವಜನಿಕರಿಗೆ ಅಕ್ಕಿ ಜತೆಗೆ ಅಗತ್ಯ ವಸ್ತುಗಳಾದ ಬೆಲ್ಲ, ಸಕ್ಕರೆ, ಉಪ್ಪು, ಎಣ್ಣೆ, ಬೇಳೆ, ಗೋಧಿ, ದ್ವಿದಳಧಾನ್ಯಗಳು ಸಹ ಪೂರೈಸಬೇಕು. ನ್ಯಾಯಬೆಲೆ ಅಂಗಡಿಗಳನ್ನು ಆರ್ಥಿಕವಾಗಿ ಸಬಲಗೊಳಿಸಲು ಇರುವ ಆರ್ಥಿಕ ನೀತಿಗಳನ್ನು ಅಳವಡಿಸಬೇಕು. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ನಡೆಯುವ ಹೋರಾಟಕ್ಕೆ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರು, ವಿ.ಎಸ್.ಎಸ್.ಎನ್ ಕಾರ್ಯದರ್ಶಿ, ಸಂಘ ಸಂಸ್ಥೆಗಳ ಕಾರ್ಯದರ್ಶಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಶೀಘ್ರ ಅನುಷ್ಠಾನಗೊಳಿಸಿ: ಸಗಟು ಮಳಿಗೆಗೆ ಬಯೋಮೆಟ್ರಿಕ್, ಸಿ.ಸಿ ಕ್ಯಾಮೆರಾ ಹಾಗೂ ಸಾಗಾಣಿಕೆ ಮಾಡುವ ಲಾರಿಗಳಿಗೆ ಜಿ.ಪಿ.ಎಸ್ ಅಳವಡಿಸಲು ಮನವಿ ಪತ್ರ ಕೊಡಲಾಗಿದೆ. ಈ ಪೈಕಿ ಸಿಸಿ ಕ್ಯಾಮೆರಾ ಅಳವಡಿಕೆ 13 ಕೋಟಿ ರೂ ಹಾಗೂ ಆಹಾರ ಪದಾಧರ್ಥ ಸಂರಕ್ಷಣೆಗೆ ಮಾಡಲು ಪ್ಲಾಸ್ಟಿಕ್ ಚೀಲಕ್ಕೆಂದು 88 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಇನ್ನೂ ಅನುಷ್ಠಾನಗೊಂಡಿಲ್ಲ. ಇದರ ಬಗ್ಗೆ ತುರ್ತು ಕ್ರಮ ವಹಿಸಬೇಕು ಎಂದ ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ.ರಾಜಣ್ಣ, ಕಾರ್ಯದರ್ಶಿ ದೇವರಾಜು, ಪದಾಧಿಕಾರಿಗಳಾದ ನಾಗೇಶ್, ಸ್ವಾಮಿ, ಮಂಚಯ್ಯ ಇದ್ದರು.