

ಮಂಡ್ಯ: ಪಡಿತರ ಪಡೆಯಲು ಕಿ.ಮೀಗಟ್ಟಲೇ ಹೋಗಬೇಕಾದ ತಾಲೂಕಿನ ದುದ್ದ ಹೋಬಳಿ ಜಯಪುರ(ತಿಬ್ಬನಹಳ್ಳಿ) ಗ್ರಾಮಸ್ಥರ ಬರೋಬರಿ ಮೂವತ್ತು ವರ್ಷದ ಸಮಸ್ಯೆಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪರಿಹಾರ ಒದಗಿಸಿದ್ದಾರೆ.
ಜಯಪುರದ 227 ಪಡಿತರ ಚೀಟಿದಾರರು ಆಹಾರ ಪದಾರ್ಥ ಪಡೆಯಬೇಕಾದರೆ ಸುಮಾರು ಮೂರು ಕಿ.ಮೀ ದೂರದಲ್ಲಿರುವ ಹಾಡ್ಯ ಗ್ರಾಮಕ್ಕೆ ಹೋಗಬೇಕಿತ್ತು. ಇದು ಗ್ರಾಮಸ್ಥರಿಗೆ ದೊಡ್ಡ ಸಮಸ್ಯೆಯೇ ಆಗಿತ್ತು. ಪ್ರತಿ ತಿಂಗಳು ಹಾಡ್ಯಕ್ಕೆ ಹೋಗಬೇಕಿದ್ದರಿಂದ ತೊಂದರೆಯಾಗಿತ್ತು. ಕೆಲವೊಮ್ಮೆ ಹೋದರೂ ಸರ್ವರ್ ಅಥವಾ ತಾಂತ್ರಿಕ ಸಮಸ್ಯೆ ಎದುರಾಗಿ ವಾಪಸ್ ಬರಬೇಕಾದ ಉದಾಹರಣೆಗಳೂ ಇವೆ. ಇನ್ನು ಈ ಮಾರ್ಗದಲ್ಲಿ ವಿಶ್ವೇಶ್ವರಯ್ಯ ನಾಲೆ ಇರುವುದರಿಂದ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುವಂತಾಗಿತ್ತು. ಕೆಲವರಿಗೆ ಸ್ವಂತ ವಾಹನವಿಲ್ಲದೇ ಬೇರೆಯವರನ್ನು ಅಲವಂಬಿಸಬೇಕಿತ್ತು.
ಈ ಹಿನ್ನೆಲೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರು ವಿಧಾನಸಭಾ ಚುನಾವಣೆ ಸಮಯದಲ್ಲಿ ದುದ್ದ ಮಾರ್ಗವಾಗಿ ಪಾದಯಾತ್ರೆ ನಡೆಸಿದ ವೇಳೆ ಗ್ರಾಮಸ್ಥರು ಸಮಸ್ಯೆಯನ್ನು ಗಮನಕ್ಕೆ ತಂದಿದ್ದರು. ಅದಕ್ಕೆ ಸ್ಪಂದಿಸಿದ ದರ್ಶನ್, ಜನರಿಗೆ ಅನುಕೂಲ ಕಲ್ಪಿಸುವ ಭರವಸೆ ನೀಡಿದ್ದರು. ಅದರಂತೆ ಹಾಡ್ಯ ಪಡಿತರ ವಿತರಣಾ ಕೇಂದ್ರದ ಉಪಕೇಂದ್ರವನ್ನು ಜಯಪುರ(ತಿಬ್ಬನಹಳ್ಳಿ)ದಲ್ಲಿಯೇ ಗುರುವಾರ ಪ್ರಾರಂಭಿಸಲಾಯಿತು. ಮಾತ್ರವಲ್ಲದೆ ಅಕ್ಕಿ, ರಾಗಿಯನ್ನು ವಿತರಿಸಲಾಯಿತು. ಸದ್ಯಕ್ಕೆ ಖಾಸಗಿ ವ್ಯಕ್ತಿ ಮನೆಯಲ್ಲಿ ಆಹಾರ ಪದಾರ್ಥವಿಟ್ಟು ಕೊಡುವ ವ್ಯವಸ್ಥೆ ಮಾಡಲಾಗಿದ್ದು, ಶೀಘ್ರದಲ್ಲಿಯೇ ಸರ್ಕಾರಿ ಜಾಗದಲ್ಲಿ ಗೋಡೌನ್ ನಿರ್ಮಿಸುವ ಕೆಲಸ ಪ್ರಾರಂಭವಾಗಲಿದೆ. ಸಮಸ್ಯೆಗೆ ಸ್ಪಂದಿಸಿದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಜಯಪುರ(ತಿಬ್ಬನಹಳ್ಳಿ) ಗ್ರಾಮದಲ್ಲಿಯೇ ಉಪಕೇಂದ್ರ ಪ್ರಾರಂಭ ಮಾಡಲಾಗಿದೆ. ಗ್ರಾಮಸ್ಥರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇನ್ನು ಗ್ರಾಮಕ್ಕೆ ರಸ್ತೆ ಮಾಡಿಕೊಡಬೇಕೆಂದು ಕೇಳಿದ್ದಾರೆ. ಮುಂದಿನ ದಿನದಲ್ಲಿ ರಸ್ತೆ ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.
ಫುಡ್ ಇನ್ಸ್‌ಪೆಕ್ಟರ್ ರೇವಣ್ಣ, ಗ್ರಾಮ ಪಂಚಾಯಿತಿ ಸದಸ್ಯೆ ಸುಲೋಚನಾ, ರೈತ ಸಂಘದ ಶಿವಳ್ಳಿ ಚಂದ್ರು, ಗ್ರಾಮಸ್ಥರಾದ ಶಿವಗಯ್ಯ, ಚನ್ನೇಗೌಡ, ಶಿವಣ್ಣ ಇತರರಿದ್ದರು.