

ಬೆಂಗಳೂರು: ಕೇಂದ್ರ ಸರ್ಕಾರದ "ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ' ಹಾಗೂ ರಾಜ್ಯ ಸರ್ಕಾರದ "ಅನ್ನಭಾಗ್ಯ' ಯೋಜನೆಯಡಿ ನೀಡುವ ಪಡಿತರ ಈ ತಿಂಗಳು 14 ದಿನ ಕಳೆದರೂ ಭಾರತೀಯ ಆಹಾರ ನಿಗಮದಿಂದ(ಎಫ್ಸಿಐ) ಸಗಟು ಮಳಿಗೆಗಳಿಗೆ ಎತ್ತುವಳಿಯಾಗಿಲ್ಲ.
ಪ್ರತಿ ತಿಂಗಳು 1ನೇ ತಾರೀಖಿನಿಂದಲೇ ಎಫ್ಸಿಐನಿಂದ ಸಗಟು ಮಳಿಗೆಗಳಿಗೆ ಅಕ್ಕಿ, ಜೋಳ,ರಾಗಿ ಪೂರೈಕೆಯಾಗುತ್ತದೆ. ಬಳಿಕ ನ್ಯಾಯಬೆಲೆ ಅಂಗಡಿಗಳು, ಕಾರ್ಡ್ದಾರರಿಗೆ ರೇಷನ್ ವಿತರಿಸಬೇಕಿತ್ತು. ಆದರೆ, 2 ವಾರ ಕಳೆದರೂ ಪಡಿತರ ಹಂಚಿಕೆಯಾಗಿಲ್ಲ. ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್,10.80 ಲಕ್ಷ ಅಂತ್ಯೋದಯ ಕಾರ್ಡ್ಗಳಿಂದ ಒಟ್ಟು 4.11 ಕೋಟಿ ಲಾನುಭವಿಗಳಿದ್ದಾರೆ. ಪ್ರತಿ ತಿಂಗಳು 4.34 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥ ವಿತರಿಸಲಾಗುತ್ತಿದೆ.
ಸರ್ಕಾರಕ್ಕೆ ಪತ್ರ:
ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಪದಾರ್ಥ ಪೂರೈಕೆಯಾಗದಿರುವ ಬಗ್ಗೆ ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಆಹಾರ ಸಚಿವ ಕೆ.ಎಚ್.ಮುನಿಯಪ್ಪಗೆ ಪತ್ರ ಬರೆದಿದ್ದಾರೆ. ಪ್ರತಿ ನಿತ್ಯ ಕಾರ್ಡ್ದಾರರು ಅಂಗಡಿಗಳ ಮುಂದೆ ಧಾವಿಸಿ ಪಡಿತರ ವಿತರಣೆ ಬಗ್ಗೆ ವಿಚಾರಿಸುತ್ತಿದ್ದಾರೆ. ಆದರೆ ಅಧಿಕಾರಿಗಳನ್ನು ವಿಚಾರಿಸಿದರೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಉಳಿದ 15 ದಿನಗಳಲ್ಲಿ ಕಾರ್ಡ್ದಾರರಿಗೆ ಅಕ್ಕಿ ವಿತರಣೆ ತೊಂದರೆಯಾಗಲಿದೆ. ಹಾಗಾಗಿ, ಕೂಡಲೆ ಆಹಾರ ಪದಾರ್ಥ ಎತ್ತುವಳಿಗೆ ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಪಡೆಯುವಾಗ ಮುದ್ರಿತ ರಶೀದಿ ನೀಡುವ ನಿಯಮ ಜಾರಿಗೆ ತರುವ ಮುನ್ನ ಮಾಲೀಕರ ಜತೆ ಸರ್ಕಾರ ಚರ್ಚಿಸಬೇಕು. ರೇಷನ್ ವಿತರಣೆಗೆ ಸಂಬಂಧಪಟ್ಟಂತೆ ಹೊಸ ಹೊಸ ನಿಯಮವನ್ನು ವಿಧಿಸಲಾಗುತ್ತಿದೆ. ಇದರಿಂದ, ಪಡಿತರ ವಿತರಣೆಗೆ ಸಮಸ್ಯೆಯಾಗಲಿದೆ ಎಂದು ಕೃಷ್ಣಪ್ಪ ಹೇಳಿದರು.
ಹಿಂದೆಯೂ ತಡವಾಗಿ ಹಂಚಿಕೆ
2 ತಿಂಗಳ ಹಿಂದೆಯೂ ಅಕ್ಕಿ ವಿತರಣೆಯಲ್ಲಿ ವ್ಯತ್ಯಯವಾಗಿತ್ತು. ಹಣದ ಬದಲು ೆಬ್ರವರಿಯಿಂದ ಹೆಚ್ಚುವರಿ ಅಕ್ಕಿಯನ್ನು ವಿತರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ೆಬ್ರವರಿ, ಮಾರ್ಚ್ ತಿಂಗಳ ಅಕ್ಕಿಯನ್ನು ಒಂದೇ ಬಾರಿ ವಿತರಿಸಬೇಕಿತ್ತು. ಜತೆಗೆ, ಕೇಂದ್ರದ ಪಾಲಿನ 5 ಕೆ.ಜಿ. ಅಕ್ಕಿ ಸೇರಿ ಒಟ್ಟು 15 ಕೆ.ಜಿ. ಅಕ್ಕಿಯನ್ನು ಬಿಪಿಎಲ್ನ ಪ್ರತಿ ಸದಸ್ಯನಿಗೆ ನೀಡಬೇಕಿತ್ತು. ಆದರೆ, ನ್ಯಾಯಬೆಲೆ ಅಂಗಡಿಗಳಿಗೆ ತಡವಾಗಿ ರೇಷನ್ ಎತ್ತುವಳಿ ಅವಕಾಶ ಮಾಡಿಕೊಟ್ಟಿತ್ತು.