

ಉಡುಪಿ: ಪಡಿತರ ಅಂಗಡಿಗಳಲ್ಲಿ ಜನ ಪಡಿತರ ರೇಶನ್ ಪಡೆಯಲು ಬೆರಳಚ್ಚು ಸಮಸ್ಯೆಯಿಂದ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ ಎಂದು ಬುಧವಾರ ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಧನಂಜಯ್ ಕುಂದರ್ ವಿಷಯ ಪ್ರಸ್ತಾಪಿಸಿ, ಪಡಿತರ ಪಡೆಯಲು ಬೆರಳಚ್ಚು ತಂತ್ರಜ್ಞಾನ ಸಮಸ್ಯೆಯಾಗಿದೆ. ಇದು ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ, ಬೆರಳಚ್ಚು ವ್ಯವಸ್ಥೆ ಹಿಂಪಡೆದು ಈ ಹಿಂದೆ ನೀಡುತ್ತಿದ್ದ ಮ್ಯಾನುಯಲ್ ಮಾದರಿಯಲ್ಲೆ ಪಡಿತರ ನೀಡಬೇಕು ಎಂದು ಆಗ್ರಹಿಸಿದರು. ರಾಜೇಂದ್ರ ಪಂದುಬೆಟ್ಟು ಮಾತನಾಡಿ, ನಮ್ಮ ವ್ಯಾಪ್ತಿಯಲ್ಲೂ ಸಮಸ್ಯೆ ಗಂಭೀರವಾಗಿದೆ ಎಂದರು. ಪ್ರತಿಕ್ರಿಯಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್, ಬಿಎಸ್ಸೆನ್ನೆಲ್ ನಿರ್ವಹಣೆ ವ್ಯವಸ್ಥಿತವಿಲ್ಲದೆ ಸರ್ವರ್ ಡೌನ್ ಇರುವುದರಿಂದ ಈ ಸಮಸ್ಯೆ ಆಗಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕರಾವಳಿ ಜಿಲ್ಲೆಯಲ್ಲಿ ಬಿಳಿ ಅಕ್ಕಿ ಸೇವನೆ ಇಲ್ಲ. ಪಡಿತರ ಅಂಗಡಿಯಲ್ಲಿ ಬಿಳಿ ಅಕ್ಕಿ ನೀಡಲಾಗುತ್ತಿದೆ. ಇದರ ಬದಲು ಕುಚ್ಚಲಕ್ಕಿ ನೀಡಬೇಕು ಎಂದು ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು. ಈ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಭೆಯಲ್ಲಿ ನಿರ್ಣಯ ಕೈಗೊಂಡು ಶಾಸಕರು, ಸಚಿವರ ಗಮನ ಸೆಳೆಯಬೇಕು ಎಂದು ಇಒ ಮೋಹನ್‌ರಾಜ್ ಹೇಳಿದರು.
ಹೊರಜಿಲ್ಲೆ, ರಾಜ್ಯದಿಂದ ಆಗಮಿಸಿ ಉಡುಪಿಯಲ್ಲಿ ನೆಲೆಸಿದವರಿಗೆ ಜಾತಿ ಪ್ರಮಾಣ ಪಡೆಯಲು ಸಮಸ್ಯೆಯಾಗಿದೆ ಎಂದು ರಾಜೇಂದ್ರ ಪಂದುಬೆಟ್ಟು ಪ್ರಸ್ತಾಪಿಸಿದರು. ವಲಸೆ ಪ್ರಮಾಣಪತ್ರ, ಶಾಲೆಯ ದಾಖಲಾತಿ (ಟಿಸಿ) ನೀಡಿದಲ್ಲಿ ಈ ಬಗ್ಗೆ ಪರಿಶೀಲಿಸಬಹುದು. ನಿರ್ದಿಷ್ಟ ಪ್ರಕರಣದ ಮಾಹಿತಿ ನೀಡಿದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಚರ್ಚಿಸಲಾಗುವುದು ಎಂದು ಇಒ ಮೋಹನ್‌ರಾಜ್ ಸ್ಪಷ್ಟನೆ ನೀಡಿದರು. ಉಪಾಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಿಲ್ಪಾ ಆರ್.ಕೋಟ್ಯಾನ್, ತಾಪಂ ಲೆಕ್ಕ ಸಹಾಯಕ ಮೆಲ್ವಿನ್ ಥೋಮಸ್ ಸಭೆಯಲ್ಲಿದ್ದರು.
ಹಕ್ಕಿ ಜ್ವರ ಭೀತಿ ಬೇಡ
ಸಭೆಯಲ್ಲಿ ಹಕ್ಕಿ ಜ್ವರ ಸಂಬಂಧಿಸಿ ಸದಸ್ಯರು ವಿಷಯ ಪ್ರಸ್ತಾಪಿಸಿದರು. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋಪಾಲಕೃಷ್ಣ ಭಟ್ ಉತ್ತರಿಸಿ, ಕೇರಳದಿಂದ ಬರುತ್ತಿರುವ ವಾಹನಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಪ್ರತಿ ತಿಂಗಳು ಪೌಲ್ಟ್ರಿ ಫಾರಂಗಳಿಗೆ ಭೇಟಿ ಮಾದರಿಯನ್ನು ಸಂಗ್ರಹಿಸಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಕೋಳಿ ಸಾಗಾಟ ವಾಹನಗಳಿಗೆ ಆ್ಯಂಟಿ ಬಯಾಟಿಕ್‌ಗಳನ್ನು ಸಿಂಪಡಣೆ ಮಾಡ ಲಾಗುತ್ತಿದೆ ನಮ್ಮಲ್ಲಿ ಹಕ್ಕಿ ಜ್ವರದ ಆತಂಕ ಇಲ್ಲ ಎಂದು ತಾಪಂ ಇಒ ಗೋಪಾಲಕೃಷ್ಣ ಭಟ್ ಹೇಳಿದರು.